ADVERTISEMENT

ಕೆಫೆ ಬಾಂಬ್: ಕರ್ನಾಟಕವನ್ನು ಟೆರರ್ ಹಬ್ ಮಾಡುತ್ತಿರುವ ಕಾಂಗ್ರೆಸ್; ಬಿಜೆಪಿ ಆರೋಪ

ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಬಾಂಬರ್ ಮುಸಾವೀರ್ ಹುಸೇನ್ ಶಾಜೀಬ್ ಬಂಧನದ ಬೆನ್ನಲ್ಲೇ ಕಾಂಗ್ರೆಸ್‌ಗೆ ಕುಟುಕಿದ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಏಪ್ರಿಲ್ 2024, 9:56 IST
Last Updated 12 ಏಪ್ರಿಲ್ 2024, 9:56 IST
<div class="paragraphs"><p>ಕಾಂಗ್ರೆಸ್– ಬಿಜೆಪಿ</p></div>

ಕಾಂಗ್ರೆಸ್– ಬಿಜೆಪಿ

   

ಬೆಂಗಳೂರು: ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಂಧನಕ್ಕೆ ಒಳಗಾದವರು ಕಾಂಗ್ರೆಸ್ ಸಹೋದರರು ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಎಕ್ಸ್ ತಾಣದಲ್ಲಿ ಶುಕ್ರವಾರ ಪೋಸ್ಟ್ ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಉಗ್ರರು ಮುಕ್ತವಾಗಿ ಸಂಚರಿಸುತ್ತಿದ್ದಾರೆ ಎಂದು ಹೇಳಿದೆ.

ADVERTISEMENT

ಸಿಎಂ ಸಿದ್ದರಾಮಯ್ಯ ಅವರ ಓಲೈಕೆ ರಾಜಕಾರಣದಿಂದ ಉಗ್ರರು ಕರ್ನಾಟಕದಲ್ಲಿ ನೆಲೆ ಸ್ಥಾಪಿಸುತ್ತಿದ್ದಾರೆ. ಕರ್ನಾಟಕವನ್ನು ಟೆರರ್ ಹಬ್ ಮಾಡುವ ಏಕೈಕ ಗ್ಯಾರಂಟಿಯನ್ನು ಪೂರೈಸುವುದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಬಾಂಬರ್ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಬಾಂಬ್ ಇಡಲು ಸಹಾಯ ಮಾಡಿದ್ದ ಆರೋಪಿ ಅಬ್ದುಲ್ ಮಥೀನ್ ತಾಹಾನನ್ನು ಪಶ್ಚಿಮ ಬಂಗಾಳದಲ್ಲಿ ಎನ್ಐಎ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಟ್ವೀಟ್ ಮಾಡಿದೆ.

ತೀರ್ಥಹಳ್ಳಿಯ ಮುಸಾವೀರ್, ಅಬ್ದುಲ್ ತಾಹಾ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದರು. ಕರ್ನಾಟಕದಿಂದ ಪಶ್ಚಿಮ ಬಂಗಾಳಕ್ಕೆ‌ ಹೋಗಿದ್ದರು. ಈ ಬಗ್ಗೆ ಮಾಹಿತಿ ಪಡೆದಿದ್ದ ಅಧಿಕಾರಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಶಂಕಿತರನ್ನು ವಶಕ್ಕೆ ಪಡೆದಿದೆ.

ಇದೇ ಪ್ರಕರಣದಲ್ಲಿ‌ ಈಗಾಗಲೇ ಮುಜಮೀಲ್ ಹಾಗೂ ಮಾಝ್ ಮುನೀರ್‌ನನ್ನು ಎನ್ಐಎ ಅಧಿಕಾರಿಗಳು ‌ಬಂಧಿಸಿದ್ದಾರೆ.

'ಬಾಂಬ್ ಇಟ್ಟಿದ್ದ‌ ಮುಸಾವೀರ್ ಶಾಜೀಬ್ ಹಾಗೂ ಸಂಚು ರೂಪಿಸಿದ್ದ ಅಬ್ದುಲ್‌ ಮಥೀನ್ ತಾಹಾನನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿಗೆ ಕರೆತರಲಾಗುತ್ತಿದೆ. ವಿಚಾರಣೆ ನಡೆಸಿ ಮತ್ತಷ್ಟು ಮಾಹಿತಿ ಕಲೆಹಾಕಬೇಕಿದೆ' ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.