ADVERTISEMENT

ಹನುಮನ ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಸಿಕ್ಕಿದ್ದು ಬಿಜೆಪಿ ಸೌಭಾಗ್ಯ: ಬೊಮ್ಮಾಯಿ

ಬಹಳ ಸಂತೋಷದಿಂದ ಅಂಜನಾದ್ರಿ ಅಭಿವೃದ್ಧಿ ಭೂಮಿಪೂಜೆ ಮಾಡಿದ್ದೇನೆ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 19:56 IST
Last Updated 14 ಮಾರ್ಚ್ 2023, 19:56 IST
ಹನುಮ ಜನ್ಮಸ್ಥಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಪ್ರಜಾವಾಣಿ ಚಿತ್ರ)
ಹನುಮ ಜನ್ಮಸ್ಥಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಪ್ರಜಾವಾಣಿ ಚಿತ್ರ)   

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಅಂಜನಾದ್ರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಬೆಟ್ಟದ ಕೆಳಭಾಗದಲ್ಲಿ ಪಾದಗಟ್ಟೆ ಬಳಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಾಗುತ್ತಿದೆ. ರಾಮನ ಭಕ್ತ ಹನುಮಂತನ ಕ್ಷೇತ್ರ ಅಂಜನಾದ್ರಿ ಅಭಿವೃದ್ಧಿ ಭಾಗ್ಯ ಬಿಜೆಪಿಗೆ ಲಭಿಸಿದ್ದು ನಮ್ಮ ಸುದೈವ. ಪ್ರದರ್ಶನ ಪಥ, ವಾಣಿಜ್ಯ ಸಂಕೀರ್ಣ, ಶೌಚಾಲಯ ಸೇರಿ ಮೂಲಸೌಕರ್ಯ ಕಲ್ಪಿಸಲಾಗುವುದು’ ಎಂದರು.

‘ನಮ್ಮೆಲ್ಲರ ಪರಿಕಲ್ಪನೆಯಂತೆ ಅಂಜನಾದ್ರಿ ಮಾದರಿಯಾಗಿ ಅಭಿವೃದ್ಧಿ ಮಾಡಲಾಗುವುದು. ಈಗಾಗಲೇ ₹125 ಕೋಟಿ ಅನುದಾನ ಮೀಸಲಿಡಲಾಗಿದೆ. ಮೊದಲ ಹಂತದಲ್ಲಿ ₹21.51 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುವುದು. ಹಂತಹಂತವಾಗಿ ರೋಪ್‌ ವೇ ಸೇರಿ ಇನ್ನಿತರ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

ಆಗದ ಭೂಸ್ವಾಧೀನ: ‘ಬೆಟ್ಟದ ಕೆಳಭಾಗದಲ್ಲಿ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಆಗಲೇ ಭೂಮಿಪೂಜೆ ನೆರವೇರಿಸಿದ್ದು ಬೇಸರ ಮೂಡಿಸಿದೆ. ನಮ್ಮ ಜಮೀನುಗಳ ಸ್ವಾಧೀನ ಕೈಬಿಟ್ಟು ಕೃಷಿ ಮಾಡಲು ನಮಗೆ ಅನುವು ಮಾಡಿಕೊಡಬೇಕು’ ಎಂದು ರೈತರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಅಂಗಡಿಗಳು ಬಂದ್
ಅಂಜನಾದ್ರಿಗೆ ಮುಖ್ಯಮಂತ್ರಿ ಭೇಟಿ ನೀಡುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳವಾರ ಬೆಟ್ಟದ ಕೆಳಗಿನ ಎರಡೂ ಬದಿಗಳಲ್ಲಿ ಪೂಜಾ ಸಾಮಗ್ರಿ, ತಂಪು ಪಾನೀಯ ಮಾರುವ ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು. ಬೆಟ್ಟಕ್ಕೆ ಬರುವವರಿಗೆ ಈ ಅಂಗಡಿಗಳೇ ಆಸರೆ. ಅಂಗಡಿಗಳು ಮುಚ್ಚಿದ್ದರಿಂದ ಪ್ರವಾಸಿಗರು ಪರದಾಡಬೇಕಾಯಿತು.

‘ಕಿಸಾನ್‌ ಸಮ್ಮಾನ್‌: ಶೀಘ್ರ ಹಣ’
ಗಂಗಾವತಿಯಲ್ಲಿ ನಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಕಿಸಾನ್‌ ಸಮ್ಮಾನ್‌ ಯೋಜನೆಯ ಎರಡನೇ ಕಂತಿನ ₹998 ಕೋಟಿ ಹಣ ಎರಡು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು. ಒಂದು ವಾರದಲ್ಲಿ 23 ಸಾವಿರ ಕುರಿಗಾರರ ಸಂಘಗಳಿಗೆ ಅಮೃತ ಯೋಜನೆಯಡಿ ಸಹಾಯಧನ ಜಮೆ ಮಾಡಲಾಗುವುದು’ ಎಂದರು.

‘ಇನ್ನೊಂದು ವಾರದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಗೆ ಚಾಲನೆ ನೀಡುವೆ. ಕೊಪ್ಪಳ ಜಿಲ್ಲೆಯಲ್ಲಿ 100 ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.