ADVERTISEMENT

ವಿಧಾನ ಮಂಡಲ ಅಧಿವೇಶನ: ಬಿಜೆಪಿ– ಜೆಡಿಎಸ್‌ ಸಮನ್ವಯ ಸಭೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 23:17 IST
Last Updated 10 ಆಗಸ್ಟ್ 2025, 23:17 IST
   

ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಉದ್ದೇಶದಿಂದ ಬಿಜೆಪಿ–ಜೆಡಿಎಸ್‌ ಪಕ್ಷಗಳ ಸಮನ್ವಯ ಸಮಿತಿ ಸಭೆ ಭಾನುವಾರ ಸಂಜೆ ಗೋಲ್ಡ್‌ ಫಿಂಚ್‌ ಹೋಟೆಲ್‌ನಲ್ಲಿ ನಡೆಯಿತು.

ಸುಮಾರು 1 ತಾಸು ನಡೆದ ಈ ಸಭೆಯಲ್ಲಿ 30 ಕ್ಕೂ ಹೆಚ್ಚು ವಿಷಯಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುವ ಕುರಿತು ಚರ್ಚೆ ನಡೆಸಲಾಯಿತು ಎಂದು ಸಭೆಯ ಬಳಿಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸುದ್ದಿಗಾರರಿಗೆ ತಿಳಿಸಿದರು.

‘ಪ್ರತಿ ದಿನ ಯಾವ ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂಬ ಬಗ್ಗೆ ಎರಡೂ ಪಕ್ಷಗಳ ನಾಯಕರು ಮೊದಲೇ ಸಭೆ ಸೇರಿ ತೀರ್ಮಾನಿಸುತ್ತೇವೆ’ ಎಂದು ಅಶೋಕ ಹೇಳಿದರು.

ADVERTISEMENT

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ಸದನವು 15 ರಿಂದ 20 ದಿನಗಳ ಕಾಲ ನಡೆಯಬೇಕಿತ್ತು. ಆದರೆ, 8–9 ದಿನಗಳಿಗೆ ಸೀಮಿತ ಮಾಡಿದ್ದಾರೆ. ಸರ್ಕಾರ ಕಾಟಾಚಾರಕ್ಕೆ ಅಧಿವೇಶನ ನಡೆಸುತ್ತಿದೆ. ರೈತರ ಸಮಸ್ಯೆ, ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಪ್ರಸ್ತಾಪಿಸಿ, ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡುತ್ತೇವೆ’ ಎಂದರು.

ಸಭೆಯಲ್ಲಿ ಜೆಡಿಎಸ್‌ ಗುಂಪಿನ ನಾಯಕ ಸುರೇಶ್‌ ಬಾಬು, ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ವಿಧಾನಪರಿಷತ್‌ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.