ADVERTISEMENT

ವಿಧಾನಸಭೆಯಲ್ಲಿ BJP–JDS ಅಹೋರಾತ್ರಿ ಧರಣಿ: ತಿಮ್ಮಾಪುರ ರಾಜೀನಾಮೆಗೆ ಬಿಗಿಪಟ್ಟು

ಸದನದಲ್ಲೇ ಊಟ, ನಿದ್ದೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 19:23 IST
Last Updated 3 ಫೆಬ್ರುವರಿ 2026, 19:23 IST
ವಿಧಾನಸಭೆಯಲ್ಲಿ ಬಿಜೆಪಿ –ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಿದರು
ವಿಧಾನಸಭೆಯಲ್ಲಿ ಬಿಜೆಪಿ –ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಿದರು   

ಬೆಂಗಳೂರು: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿರುವ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಸದಸ್ಯರು ಸದನದಲ್ಲಿ ಮಂಗಳವಾರ ಅಹೋರಾತ್ರಿ ಧರಣಿ ನಡೆಸಿದರು.

ಸದನದಲ್ಲಿಯೇ ರಾತ್ರಿಯ ಭೋಜನ ಸೇವಿಸಿದ ನಂತರ, ಅಲ್ಲಿಯೇ ನಿದ್ದೆ ಮಾಡಿದರು. ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಸದನಕ್ಕೆ ಬಂದು ಧರಣಿನಿರತರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ಖಾದರ್, ‘ಬಿಜೆಪಿಯವರು ಸದನದಲ್ಲಿ ರಾತ್ರಿಯಿಡೀ ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಅವರ ಜೊತೆಗೆ ಮಾತನಾಡಿದ್ದೇನೆ. ಮಾತನಾಡುವುದು ನಮ್ಮ ಕರ್ತವ್ಯ. ಧರಣಿ ನಿರತರಿಗೆ ನೆಮ್ಮದಿಯಾಗಿ ನಿದ್ದೆ ಮಾಡಲು ಅಗತ್ಯವಾದ ವ್ಯವಸ್ಥೆ ಮಾಡಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಅಬಕಾರಿ ಇಲಾಖೆ ಭ್ರಷ್ಟಾಚಾರದ ಕೂಪವಾಗಿದೆ’ ಎಂದು ಬಿಜೆಪಿ ಸದಸ್ಯರು ಬೆಳಿಗ್ಗೆಯೇ ಆರೋಪಿಸಿದ್ದರು. ಸಂಜೆ ಉತ್ತರ ನೀಡುವುದಾಗಿ ಸರ್ಕಾರ ಹೇಳಿತ್ತು. ಬಳಿಕ, ವಿಬಿ ಜಿ ರಾಮ್ ಜಿ ಕುರಿತ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಈ ವಿಷಯದಲ್ಲಿ ಗದ್ದಲ ನಡೆದಿದ್ದರಿಂದಾಗಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು.

ಬಳಿಕ, ಕಲಾಪ ಆರಂಭವಾದಾಗ ನಿರ್ಣಯದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ಆರಂಭಿಸಿದರು. ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದಾಗ, ಕಲಾಪ ಮುಂದೂಡಲಾಯಿತು. ಮಾತುಕತೆ ಬಳಿಕ ಕಲಾಪ ಆರಂಭವಾದಾಗ ಚರ್ಚೆ ನಡೆಯಿತು. 

ವಿರೋಧ ಪಕ್ಷದ ಆರೋಪಗಳಿಗೆ ಸದನದಲ್ಲಿ ಸಂಜೆ ಉತ್ತರ ನೀಡಿದ ತಿಮ್ಮಾ‍ಪುರ, ‘ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’ ಎಂದರು. ಇದರಿಂದ ಸಿಟ್ಟಿಗೆದ್ದ ಬಿಜೆ‍ಪಿ, ಜೆಡಿಎಸ್ ಸದಸ್ಯರು ಧರಣಿಗೆ ಮುಂದಾದರು. ತಕ್ಷಣವೇ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.

ಕಲಾಪ ಮುಂದೂಡಿದ ಬಳಿಕವೂ ವಿರೋಧ ಪಕ್ಷಗಳ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಮುಂದುವರಿಸಿದರು. ಬಳಿಕ, ಅಹೋರಾತ್ರಿ ಧರಣಿ ನಡೆಸಲು ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ತೀರ್ಮಾನಿಸಿದರು.

ರಾಜೀನಾಮೆ ಏಕೆ ಕೊಡಲಿ: ತಿಮ್ಮಾಪುರ
‘ಈ ಹಿಂದೆ ಯಾರ‍್ಯಾರು ಅಬಕಾರಿ ಸಚಿವರಾಗಿದ್ದರೊ ಅವರೆಲ್ಲರ ಮೇಲೆಯೂ ಆರೋಪಗಳು ಬಂದಿವೆ. ನನ್ನ ಮೇಲೂ ಆರೋಪ ಮಾಡಿದ್ದಾರೆ. ತೇಜೋವಧೆ ಮಾಡಬೇಕಾದರೆ ಆಧಾರ ಬೇಡವೇ? ಹೀಗಾಗಿ ನಾನು ರಾಜೀನಾಮೆ ಕೊಡುವುದಿಲ್ಲ’ ಎಂದು ತಿಮ್ಮಾಪುರ ಹೇಳಿದರು. ‘ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆ. ಗೋಪಾಲಯ್ಯ ಶಶಿಕಲಾ ಜೊಲ್ಲೆ ಸಿ.ಸಿ. ಪಾಟೀಲ ಮೇಲೆಯೂ ಲಂಚದ ಆರೋಪ ಬಂದಿತ್ತು. ಅವರೇನು ರಾಜೀನಾಮೆ ಕೊಟ್ಟಿದ್ದಾರೆಯೇ? ಈಗ ಬಂದಿರುವ ಆರೋಪದಲ್ಲಿ ನನ್ನ ಪಾತ್ರವೇನಿದೆ? ಆರೋಪದಲ್ಲಿ ಸಿಲುಕಿಕೊಂಡಿರುವ ಅಧಿಕಾರಿಗಳಿಗೂ ನನಗೂ ಯಾವುದೇ ಸಂಬಂಧ ಇಲ್ಲ’ ಎಂದರು. ಆರೋಪ ಮಾಡಿರುವ ಮದ್ಯ ಮಾರಾಟಗಾರರ ಸಂಘ ಅಸ್ತಿತ್ವದಲ್ಲಿಯೇ ಇಲ್ಲ ಎಂದೂ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.