ADVERTISEMENT

ರಾಜ್ಯಸಭೆ ಚುನಾವಣೆಗೆ ಈರಣ್ಣ ಕಡಾಡಿ, ಅಶೋಕ ಗಸ್ತಿ ಬಿಜೆಪಿ ಅಭ್ಯರ್ಥಿಗಳು

ಅಚ್ಚರಿಯ ಆಯ್ಕೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 10:12 IST
Last Updated 8 ಜೂನ್ 2020, 10:12 IST
ಅಶೋಕ ಗಸ್ತಿ ಮತ್ತು ಈರಣ್ಣ ಕಡಾಡಿ
ಅಶೋಕ ಗಸ್ತಿ ಮತ್ತು ಈರಣ್ಣ ಕಡಾಡಿ   

ನವದೆಹಲಿ: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿರುವ ಸಾಮಾನ್ಯ ಕಾರ್ಯಕರ್ತರಿಬ್ಬರನ್ನು ಆಯ್ಕೆ ಮಾಡಿರುವುದು ವಿಶೇಷ.

ಪಕ್ಷದ ಬೆಳಗಾವಿ ವಿಭಾಗೀಯ ಪ್ರಭಾರಿ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ ಹಾಗೂ ದೇವರಾಜ ಅರಸು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ರಾಯಚೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ ಗಸ್ತಿ ಅವರೇ ರಾಜ್ಯಸಭೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು.

ಲಿಂಗಾಯತ ಸಮುದಾಯಕ್ಕೆ ಸೇರಿರುವ ಈರಣ್ಣ ಬೆಳಗಾವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದವರು. ಇನ್ನೊಬ್ಬ ಅಭ್ಯರ್ಥಿ, ರಾಯಚೂರು ಮೂಲದ ಅಶೋಕ ಗಸ್ತಿ ಅವರು ಸವಿತಾ ಸಮಾಜಕ್ಕೆ ಸೇರಿದವರು.

ADVERTISEMENT

ಈ ಇಬ್ಬರೂ ಅಚ್ಚರಿಯ ಅಭ್ಯರ್ಥಿಗಳಾಗಿದ್ದು, ರಾಜ್ಯ ಕೋರ್‌ ಕಮಿಟಿಯು ಕಳುಹಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಕೆಎಲ್‌ಇ ಸಂಸ್ಥೆಯ ಮುಖ್ಯಸ್ಥ ಪ್ರಭಾಕರ ಕೋರೆ, ಮಾಜಿ ಸಂಸದ ಹುಕ್ಕೇರಿಯ ರಮೇಶ ಕತ್ತಿ, ಉದ್ಯಮಿ ಕೆ.ಪ್ರಕಾಶ ಶೆಟ್ಟಿ ಅವರ ಹೆಸರುಗಳನ್ನು ಶನಿವಾರ ನಡೆದಿದ್ದ ರಾಜ್ಯ ಕೋರ್‌ ಕಮಿಟಿಯ ಸಭೆಯಲ್ಲಿ ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸಿಕೊಡಲಾಗಿತ್ತು.

ಕಿರು ಪರಿಚಯ

ಹೆಸರು: ಈರಣ್ಣಾ ಕಡಾಡಿ

ಪೋಷಕರು: ತಂದೆ– ಭೀಮಪ್ಪ, ತಾಯಿ– ದುಂಡವ್ವ , ಕೃಷಿ ಕುಟುಂಬ

ಜನನ:1–6–1966

ವಿದ್ಯಾಭ್ಯಾಸ: ಪದವಿ ಶಿಕ್ಷಣ

ರಾಜಕೀಯ ಅನುಭವ: ಗೋಕಾಕ ತಾಲ್ಲೂಕಿನ ಕಲ್ಲೋಳಿಯವರಾದ ಈರಣ್ಣಾ ಅವರು 22ನೇ ವಯಸ್ಸಿನಲ್ಲಿಯೇ ಸಾರ್ವಜನಿಕ ಜೀವನ ಪ್ರವೇಶಿಸಿದರು. ಸಂಘ ಪರಿವಾರ ಹಾಗೂ ಬಿಜೆಪಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟಿಸಲು ತೊಡಗಿಕೊಂಡರು.

ಅರಭಾವಿ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ, ಮಂಡಳ ಅಧ್ಯಕ್ಷ, ಜಿಲ್ಲಾ ಕಾರ್ಯದರ್ಶಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಸಮಿತಿ ಕಾರ್ಯದರ್ಶಿ ಹಾಗೂ ಪ್ರಸ್ತುತ ಪಕ್ಷದ ಬೆಳಗಾವಿ ವಿಭಾಗದ ಉಸ್ತುವಾರಿಯಾಗಿದ್ದಾರೆ.

ಸ್ಥಾನ: 2008ರಲ್ಲಿ ಎನ್‌ಜಿಇಎಫ್‌ ಅಧ್ಯಕ್ಷರಾಗಿದ್ದರು. 2010ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.