ADVERTISEMENT

ಕಾಂಗ್ರೆಸ್ಸಿನಲ್ಲಿ ಹಿಡಿತ ಸಾಧಿಸಲು ಸಿದ್ದರಾಮಯ್ಯ ಪರದಾಟ: ನಳಿನ್ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 7:38 IST
Last Updated 7 ಜೂನ್ 2022, 7:38 IST
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್   

ಬೆಳಗಾವಿ: ‘ಕಾಂಗ್ರೆಸ್ಸಿನಲ್ಲಿ ಹಿಡಿತ ಸಾಧಿಸುವ ಉದ್ದೇಶದಿಂದ ಸಿದ್ದರಾಮಯ್ಯ ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ಸಿಗರೇ ಮುಜುಗರಕ್ಕೆ ಒಳಗಾಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಒಳಜಗಳದಿಂದ ಕಾಂಗ್ರೆಸ್ಸಿಗರ ಆತ್ಮವಿಶ್ವಾಸ ಕುಗ್ಗಿದೆ. ಹೀಗಾಗಿ ಪಕ್ಷ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚುತ್ತಿದೆ’ ಎಂದರು.

‘ಕಾಂಗ್ರೆಸ್ ಚಿಂತನಾ ಶಿಬಿರ ಮುಗಿದ ಮೇಲೆ 60ಕ್ಕೂ ಹೆಚ್ಚು ರಾಷ್ಟ್ರಮಟ್ಟದ ನಾಯಕರು ಆ ಪಕ್ಷ ತೊರೆದಿದ್ದಾರೆ. ರಾಜ್ಯದಲ್ಲಿ ಕೂಡ ಇದೇ ಸ್ಥಿತಿ ಇದೆ. ಈಗಾಗಲೇ ಮುಖ್ಯಮಂತ್ರಿ ಚಂದ್ರು, ಬ್ರಿಜೀಶ್ ಕಾಳಪ್ಪ, ಸುದರ್ಶನ್ ಅವರಂಥ ಹಿರಿಯ ನಾಯಕರು ಕೂಡ ಪಕ್ಷದಿಂದ ಕಾಲು ಹೊರಗಿಟ್ಟಿದ್ದಾರೆ’ ಎಂದೂ ಕಟೀಲ್ ಹೇಳಿದರು.

ADVERTISEMENT

‘ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ಕೆಪಿಸಿಸಿ ಮಧ್ಯೆ ಸಹಮತ ಮೂಡಿಲ್ಲ. ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರೇ ಜೆಡಿಎಸ್ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಸಿದ್ದರಾಮಯ್ಯ ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ನಡೆದ್ದಾರೆ’ ಎಂದು ಲೇವಡಿ ಮಾಡಿದರು.

‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿ ಆಗಬೇಕು ಎಂಬ ಒಂದೇ ಗುರಿ ಇಟ್ಟುಕೊಂಡು ಸಿದ್ದರಾಮಯ್ಯ ಹೀಗೆಲ್ಲ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಇದನ್ನು ಸಹಿಸಲಾಗುತ್ತಿಲ್ಲ. ರಾಜ್ಯ ಕಾಂಗ್ರೆಸ್ಸಿಗರ ಈ ಗೊಂದಲ ನಿವಾರಿಸುವ ಉದ್ದೇಶದಿಂದ ಚಿಂತನಾ ಸಭೆ ನಡೆಸಿದರು. ಶಿಬಿರದಿಂದ ಪಕ್ಷದಲ್ಲಿ ಮತ್ತಷ್ಟು ಬಿರುಕು ಮೂಡಿದೆ. ಇದರಿಂದ ಕಾರ್ಯಕರ್ತರು ಗೊಂದಲಕ್ಕೆ ಬಿದ್ದಿದ್ದಾರೆ’ ಎಂದರು.

ರಾಷ್ಟ್ರ ಭಕ್ತರ ಸಂಘವನ್ನು ರಾಜಕೀಯಕ್ಕೆ ಎಳೆಯಬೇಡಿ:

‘ಆರ್‌ಎಎಸ್‌ಎಸ್ ರಾಷ್ಟ್ರಭಕ್ತರನ್ನು ತಯಾರು ಮಾಡುವ ಸಂಘಟನೆ. ವಿನಾಕಾರಣ ಸಿದ್ದರಾಮಯ್ಯ ಅವರು ಸಂಘ ಪರಿವಾರದ ವಿಚಾರಗಳನ್ನು ರಾಜಕೀಯಕ್ಕೆ ಎಳೆದು ತರಬಾರದು’ ಎಂದು ಕಟೀಲ್ ಕಿಡಿ ಕಾರಿದರು.

‘ಸಂಘ ಪರಿವಾರದವರು ಕೇವಲ ಬಿಜೆಪಿಯಲ್ಲಿ ಮಾತ್ರ ಇಲ್ಲ. ಕಾಂಗ್ರೆಸ್ಸಿನ ಉಗ್ರಪ್ಪ, ಜೆಡಿಎಸ್ಸಿನ ಸಿಂಧ್ಯಾ ಕೂಡ ಸಂಘದಿಂದಲೇ ಬೆಳೆದವರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.