ADVERTISEMENT

ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಬಂದರೆ ಕಾಂಗ್ರೆಸ್‌ ನಿರ್ನಾಮ: ಈಶ್ವರಪ್ಪ

‘ಹಿಂದೂ ದೇವಾಲಯಗಳನ್ನು ಹಿಂಪಡೆಯುತ್ತೇವೆ’

​ಪ್ರಜಾವಾಣಿ ವಾರ್ತೆ
Published 15 ಮೇ 2022, 20:34 IST
Last Updated 15 ಮೇ 2022, 20:34 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಶಿವಮೊಗ್ಗ: ‘ಇತರೆ ಧರ್ಮೀಯರು ಆಕ್ರಮಿಸಿಕೊಂಡಿರುವ ಹಿಂದೂ ದೇವಾಲಯಗಳನ್ನು ನಾವು ಕಾನೂನಾತ್ಮಕವಾಗಿಯೇ ಹಿಂಪಡೆಯುತ್ತೇವೆ’ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

‘ಶ್ರೀ ರಂಗಪಟ್ಟಣದ ಮಸೀದಿ ಜಾಗದಲ್ಲಿ ಆಂಜನೇಯ ದೇವಸ್ಥಾನ ಇತ್ತು. ಮಸೀದಿ ಕಟ್ಟುವಾಗ ದೇವಸ್ಥಾನವನ್ನು ಪಕ್ಕಕ್ಕೆ ಸ್ಥಳಾಂತರಿಸಿ, ಆಂಜನೇಯ ದೇವಸ್ಥಾನ ಉಳಿಸಿಕೊಟ್ಟಿದ್ದೇವೆ ಎಂದು ಮುಸ್ಲಿಮರೇ ಹೇಳುತ್ತಿದ್ದಾರೆ’ ಎಂದು ತಿಳಿಸಿದರು.

‘ದೇಶದಲ್ಲಿ ಮೊಘಲರು 36 ಸಾವಿರ ದೇವಸ್ಥಾನಗಳನ್ನು ಛಿದ್ರ ಛಿದ್ರ ಮಾಡಿದ್ದಾರೆ. ಇದು ದಿನೇ ದಿನೇ ಬೆಳಕಿಗೆ ಬರುತ್ತಿದೆ. ಸಂಘರ್ಷ ಇಲ್ಲದೇ ಕೋರ್ಟ್ ಆದೇಶದಂತೆ 36 ಸಾವಿರ ದೇವಸ್ಥಾನಗಳನ್ನೂ ಜೀರ್ಣೋದ್ಧಾರ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

‘ಆಜಾನ್ ಕೂಗುವ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು, ಮುಸ್ಲಿಮರು ಬಹಳ ವರ್ಷದಿಂದ ಆಜಾನ್ ಕೂಗುತ್ತಾರೆ, ಬಿಜೆಪಿಯವರು ಏಕೆ ಅಡ್ಡ ಬರುತ್ತಾರೆ ಎಂದು ಹೇಳಿದ್ದಾರೆ. ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ಹೋಗೋಣ ಅಂದುಕೊಂಡಿದ್ದರೂ, ಕಾಂಗ್ರೆಸ್‍ನವರು ಇದಕ್ಕೆ ಬಿಡುತ್ತಿಲ್ಲ’ ಎಂದು ದೂರಿದರು.

ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಬಂದರೆ ಕಾಂಗ್ರೆಸ್‌ ನಿರ್ನಾಮ: ಈಶ್ವರಪ್ಪ

ಪ್ರಿಯಾಂಕಾ ಗಾಂಧಿ ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸಲಿ ಎಂದು ಡಿ.ಕೆ. ಶಿವಕುಮಾರ್ ಆಹ್ವಾನಿಸಿದ್ದಾರೆ. ಅವರು ಕರ್ನಾಟಕಕ್ಕೆ ಬಂದರೆ ವಿರೋಧ ಪಕ್ಷದಲ್ಲೂ ಕಾಂಗ್ರೆಸ್ ಇರಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪಭಾನುವಾರ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉತ್ತರಪ್ರದೇಶದಲ್ಲಿ 394 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿತು. ಕಾಂಗ್ರೆಸ್ ಸೋಲಿನಲ್ಲಿ ಅವರ ಪಾತ್ರವೂ ಇದೆ. ಪ್ರಿಯಾಂಕಾ ಗಾಂಧಿ ಇಲ್ಲಿಂದ ರಾಜ್ಯಸಭೆಗೆ ಸ್ಪರ್ಧಿಸಿದರೆ ಅವರು ಗೆಲ್ಲುತ್ತಾರೆ. ರಾಜ್ಯದ ಉಸ್ತುವಾರಿ ವಹಿಸಿಕೊಳ್ಳುತ್ತಾರೆ. ನಂತರ ರಾಜ್ಯದಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲೂ ಉಳಿಯಲ್ಲ’ ಎಂದು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.