ADVERTISEMENT

ಪಂಚಮಸಾಲಿ, ಒಕ್ಕಲಿಗರಿಗೆ ಮೀಸಲಾತಿ ಸ್ವಾಗತಾರ್ಹ: ಈಶ್ವರಪ್ಪ

ಶಾಸಕ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 6:57 IST
Last Updated 1 ಜನವರಿ 2023, 6:57 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಶಿವಮೊಗ್ಗ: ‘ಯಾವುದೇ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗದಂತೆ ಪಂಚಮಸಾಲಿ ಮತ್ತು ಒಕ್ಕಲಿಗರಿಗೆ 2 ‘ಡಿ’, 2 ‘ಸಿ’ ಅಡಿಯಲ್ಲಿ ಮೀಸಲಾತಿ ಕಲ್ಪಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದು ಸ್ವಾಗತಾರ್ಹ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

‘ಪಂಚಮಸಾಲಿ ಸಮುದಾಯವನ್ನು 2 ‘ಎ’ಗೆ ಸೇರಿಸಿದರೆ 102 ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ನನ್ನ ಅಭಿಪ್ರಾಯ ಕೂಡ ಅದೇ ಆಗಿತ್ತು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಸಾಕಷ್ಟು ಚರ್ಚೆ ಮಾಡಿದ ನಂತರವೇ ಕ್ರಮ ಕೈಗೊಳ್ಳಲಾಗಿದೆ’ ಎಂದು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಒಕ್ಕಲಿಗರಿಗೆ 2 ‘ಸಿ’, ಪಂಚಮಸಾಲಿಗೆ 2 ‘ಡಿ’ ಕೊಡಲು ಸಂಪುಟ ತೀರ್ಮಾನಿಸಿದೆ. ಈಗಿರುವ ಮೀಸಲಾತಿಗೆ ಇನ್ನಷ್ಟು ಪರ್ಸೆಂಟೇಜ್ ಸೇರಿಸಬೇಕು ಎಂದು ಚರ್ಚೆ ಆಗುತ್ತಿದೆ. ಮೀಸಲಾತಿ ವಿಚಾರದಲ್ಲಿ ಇದು ಸರ್ಕಾರದ ಮೊದಲ ಹೆಜ್ಜೆ. ಹಿಂದುಳಿದ ಜಾತಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು. ಪಂಚಮಸಾಲಿ ಮತ್ತು ಒಕ್ಕಲಿಗರಿಗೂ ನ್ಯಾಯ ಸಿಗಬೇಕು. ಸರ್ಕಾರದ ಮೊದಲ ಹೆಜ್ಜೆ ಎಲ್ಲರೂ ಸ್ವಾಗತಿಸಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಏಕೆ ಸ್ವಾಗತ ಮಾಡುತ್ತಿಲ್ಲವೋ ಗೊತ್ತಿಲ್ಲ. ಪಂಚಮಸಾಲಿ ಸಮುದಾಯ ಕೂಡ ವಿರೋಧ ಮಾಡಿಲ್ಲ. ಸಂಭ್ರಮವೂ ಪಟ್ಟಿಲ್ಲ. ಮೀಸಲಾತಿ ಅಂತಿಮಗೊಂಡ ಬಳಿಕ ಅವರು ಸಂತೃಪ್ತಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಮೀಸಲಾತಿ ನೀಡಲು ಜೆಡಿಎಸ್–ಕಾಂಗ್ರೆಸ್ ಕೂಡ ನಮಗೆ ಸಹಕಾರ ನೀಡಬೇಕು. ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲರೂ ಸರ್ಕಾರಕ್ಕೆ ಸಲಹೆ ನೀಡಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.