ADVERTISEMENT

ಸಚಿವ ಸ್ಥಾನಕ್ಕೆ ಕೆ.ಎಸ್‌.ಈಶ್ವರಪ್ಪ ರಾಜೀನಾಮೆ

ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 15:25 IST
Last Updated 15 ಏಪ್ರಿಲ್ 2022, 15:25 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ    

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿಅವರು ಮೊದಲನೇ ಆರೋಪಿಯಾಗಿದ್ದಾರೆ.

ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದ ಈಶ್ವರಪ್ಪ ರಾಜೀನಾಮೆ ಪತ್ರ ಸಲ್ಲಿಸಿದರು.

ಮುಖ್ಯಮಂತ್ರಿ ನಿವಾಸದ ಬಳಿ ಸೇರಿದ್ದಈಶ್ವರಪ್ಪ ಅವರ ಅಭಿಮಾನಿಗಳು, ಈಶ್ವರಪ್ಪ ಅವರಿಗೆ 'ಜಿಂದಾಬಾದ್‌' ಕೂಗಿದರು.

ADVERTISEMENT

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ವರಿಷ್ಠರು ನೀಡಿದ್ದ ಸೂಚನೆಯನ್ನು ಕಡೆಗಣಿಸಿ ಶಿವಮೊಗ್ಗದಲ್ಲಿ ಉಳಿದುಕೊಂಡಿದ್ದ ಈಶ್ವರಪ್ಪ, ಪ್ರಾಥಮಿಕ ತನಿಖೆಯ ವರದಿ ಬರುವವರೆಗೂ ಮುಂದುವರಿಯುವುದಾಗಿ ಪಟ್ಟು ಹಿಡಿದಿದ್ದರು. ಕಾಂಗ್ರೆಸ್‌ ಮುಖಂಡರು ವಿಧಾನಸೌಧದ ಮುಂದೆ ಅಹೋರಾತ್ರಿ ಧರಣಿ ಆರಂಭಿಸುತ್ತಿದ್ದಂತೆಯೇ ಪುನಃ ಮಧ್ಯಪ್ರವೇಶ ಮಾಡಿದ ಬಿಜೆಪಿ ವರಿಷ್ಠರು, ತಕ್ಷಣ ರಾಜೀನಾಮೆ ಕೊಡುವಂತೆ ಸಂದೇಶ ರವಾನಿಸಿದರು. ಅದರ ಬೆನ್ನಲ್ಲೇ ಗುರುವಾರ ಸಂಜೆ ಶಿವಮೊಗ್ಗದಲ್ಲಿ ದಿಢೀರ್‌ ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ ನಿರ್ಧಾರ ಪ್ರಕಟಿಸಿದ್ದರು.

'ನಾನು ಯಾವ ತಪ್ಪನ್ನೂ ಮಾಡಿಲ್ಲ. ಸಣ್ಣ ತಪ್ಪು ಮಾಡಿದ್ದರೂ ನನ್ನ ಮನೆ ದೇವರಾದ ಚೌಡೇಶ್ವರಿ ನೋಡಿಕೊಳ್ಳುತ್ತಾಳೆ'ಎಂದು ಹೇಳುತ್ತಾ ಗದ್ಗದಿತರಾಗಿದ್ದರು.

'ಬಾಕಿ ಬಿಲ್‌ ಪಾವತಿಗೆ ಶೇಕಡ 40ರಷ್ಟು ಲಂಚಕ್ಕೆ ಈಶ್ವರಪ್ಪ ಬೇಡಿಕೆ ಇಟ್ಟಿದ್ದಾರೆ' ಎಂದು ಆರೋಪಿಸಿದ್ದ ಸಂತೋಷ್‌ ಉಡುಪಿಯ ಲಾಡ್ಜ್‌ ಒಂದರಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಬಹಿರಂಗವಾಗಿತ್ತು. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಎಎಪಿ ಪ್ರತಿಭಟನೆ ಆರಂಭಿಸಿದ್ದವು.

ಮೈಸೂರಿನಲ್ಲಿ ಪಕ್ಷದ ವಿಭಾಗೀಯ ಮಟ್ಟದ ಸಭೆಯಲ್ಲಿದ್ದ ಈಶ್ವರಪ್ಪ ಅವರನ್ನು ಸಂಪರ್ಕಿಸಿದ್ದ ಪಕ್ಷದ ವರಿಷ್ಠರು ಬೆಂಗಳೂರಿಗೆ ತೆರಳಿ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದರು. ಆದರೆ, ಮೈಸೂರಿನಿಂದ ಹೊರಟ ಬಳಿಕ ನಿಲುವು ಬದಲಿಸಿದ್ದ ಸಚಿವರು, ಶಿವಮೊಗ್ಗಕ್ಕೆ ತೆರಳಿದ್ದರು. ಮೃತ ಗುತ್ತಿಗೆದಾರ ಸಾವಿಗೂ ಮುನ್ನ ವಾಟ್ಸ್‌ ಆ್ಯಪ್‌ ಮೂಲಕ ಕಳುಹಿಸಿದ ಸಂದೇಶ ಹಾಗೂ ಕುಟುಂಬದವರು ನೀಡಿದ ದೂರನ್ನು ಆಧರಿಸಿ ಈಶ್ವರಪ್ಪ ಮತ್ತು ಇತರರ ವಿರುದ್ಧ ಬುಧವಾರ ಪ್ರಕರಣ ದಾಖಲು ಮಾಡಲಾಗಿತ್ತು. ಆ ಬಳಿಕ ರಾಜೀನಾಮೆಗೆ ಒತ್ತಡ ಮತ್ತಷ್ಟು ಹೆಚ್ಚಿತ್ತು.

ಈಶ್ವರಪ್ಪ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ: ಅರುಣ ಸಿಂಗ್

'ಕೆ.ಎಸ್.ಈಶ್ವರಪ್ಪ ಅವರ ಮೇಲಿನ ಆರೋಪದಲ್ಲಿ‌ ಯಾವುದೇ ಹುರುಳಿಲ್ಲ. ಇದೆಲ್ಲವೂ ಕಾಂಗ್ರೆಸ್ ಷಡ್ಯಂತ್ರ' ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಆರೋಪಿಸಿದರು.

ಶುಕ್ರವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಗುತ್ತಿಗೆ ಕಾಮಗಾರಿಗೆಯಲ್ಲಿ ಶೇ 40 ರಷ್ಟು ಕಮಿಷನ್ ಪಡೆಯುತ್ತಾರೆ ಎನ್ನುವುದರಲ್ಲಿ ಅರ್ಥವಿಲ್ಲ. ಈ ಕುರಿತು ಕಾಂಗ್ರೆಸ್ ಪಕ್ಷ ಹಾಗೂ ಅದರ ನೇತಾರರು ಷಡ್ಯಂತ್ರ ನಡೆಸುತ್ತಿದ್ದಾರೆ. ಜನರಲ್ಲಿ ಗೊಂದಲ ಸೃಷ್ಟಿಸಿ, ಗೊಂದಲದಲ್ಲಿಯೇ ಬದುಕುತ್ತಾರೆ. ಶೇ 40ರಷ್ಟು ಕಮಿಷನ್ ಅನ್ನುವುದೇ ಗೊಂದಲದ ವಿಷಯ. ಗುತ್ತಿಗೆದಾರರ ಆರೋಪದ ಹಿಂದೆಯೂ ಕಾಂಗ್ರೆಸ್ ಕೈವಾಡವಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಸತ್ಯ ಬಹಿರಂಗವಾಗಲಿದೆ. ರಾಜ್ಯದ ಜನತೆಗೂ ಸತ್ಯ ಏನೆಂದು ತಿಳಿದಿದೆ' ಎಂದರು.

ಈ ಸರ್ಕಾರದಲ್ಲಿ ಮೂರನೇ ರಾಜೀನಾಮೆ

2019ರ ಜುಲೈನಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಆರೋಪ ಹೊತ್ತು ರಾಜೀನಾಮೆ ನೀಡಿರುವ ಸಚಿವರಲ್ಲಿ ಕೆ.ಎಸ್‌.ಈಶ್ವರಪ್ಪ ಮೂರನೆಯವರು. ಅಬಕಾರಿ ಸಚಿವರಾಗಿದ್ದ ಎಚ್‌.ನಾಗೇಶ್‌ ಭ್ರಷ್ಟಾಚಾರದ ಆರೋಪದ ಮೇಲೆ 2021ರ ಜನವರಿಯಲ್ಲಿ ರಾಜೀನಾಮೆ ನೀಡಿದ್ದರು. ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಲೈಂಗಿಕ ಹಗರಣದಲ್ಲಿ ಸಿಲುಕಿ 2021ರ ಮಾರ್ಚ್‌ 3ರಂದು ರಾಜೀನಾಮೆ ನೀಡಿದ್ದರು.

ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪ್ರಕರಣದ ವರ್ಗಾವಣೆ

ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ಉಡುಪಿ ಎಸ್ಪಿ ಎನ್‌.ವಿಷ್ಣುವರ್ಧನ್‌ ತಿಳಿಸಿದ್ದಾರೆ.

ಚುನಾಯಿತ ಪ್ರತಿನಿಧಿಗಳು ಆರೋಪಿಗಳಾಗಿರುವ ಮತ್ತು ಅವರು ದೂರುದಾರರಾಗಿರುವ ಎಲ್ಲ ಪ್ರಕರಣಗಳ ವಿಚಾರಣೆ ಜನ ಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಬೇಕು. ಹೀಗಾಗಿ, ಸಂತೋಷ್‌ ಪ್ರಕರಣವನ್ನು ಉಡುಪಿಯ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯದಿಂದ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂದಿದ್ದಾರೆ.

ಇವನ್ನೂ ಓದಿ
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.