ADVERTISEMENT

ನಾಡಗೀತೆ ವಿಚಾರ ‌| ಕುವೆಂಪು, ಕನ್ನಡಾಂಬೆಗೆ ಅಪಮಾನ ಎಸಗಿದ ಕಾಂಗ್ರೆಸ್: ಅಶೋಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2024, 10:58 IST
Last Updated 21 ಫೆಬ್ರುವರಿ 2024, 10:58 IST
ಆರ್.ಅಶೋಕ
ಆರ್.ಅಶೋಕ   

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ‘ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ' ನಾಡಗೀತೆಯನ್ನು ಖಾಸಗಿ ಶಾಲೆಗಳಲ್ಲಿ ಹಾಡುವುದು ಕಡ್ಡಾಯವಲ್ಲ ಎಂದು ಆದೇಶ ಹೊರಡಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ಕನ್ನಡ ವಿರೋಧಿ ಧೋರಣೆ ತೋರಿಸಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.

ನಾಡಗೀತೆ ಹಾಡುವ ಕುರಿತಾದ ಸರ್ಕಾರದ ಆದೇಶ ಪ್ರತಿಯನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಅವರು, ‘ಎರಡು ದಿನಗಳ ಹಿಂದಷ್ಟೇ ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಎಂಬ ಘೋಷವಾಕ್ಯವನ್ನು ಬದಲಾಯಿಸುವ ಹುನ್ನಾರ ಬಯಲಾದ ಬೆನ್ನಲ್ಲೇ ಈಗ ನಾಡಗೀತೆ ಕಡ್ಡಾಯ ಅಲ್ಲ ಎನ್ನುವ ಮೂಲಕ ಮತೊಮ್ಮೆ ಕುವೆಂಪು ಅವರಿಗೆ ಹಾಗೂ ಕನ್ನಡಾಂಬೆಗೆ ಕಾಂಗ್ರೆಸ್ ಸರ್ಕಾರ ಅಪಮಾನ ಎಸಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ನಿನ್ನೆ ಜ್ಞಾನ ದೇಗುಲ… ಸಾಲನ್ನು ವಿರೂಪಗೊಳಿಸಿ ರಾಷ್ಟ್ರಕವಿ ಕುವೆಂಪು ಅವರನ್ನು ಅಪಮಾನಿಸಿದ್ದ ಅವಿವೇಕಿ ಕಾಂಗ್ರೆಸ್ ಸರ್ಕಾರ, ಇದೀಗ ನಾಡಗೀತೆಯನ್ನು ಸರ್ಕಾರಿ ವ್ಯಾಪ್ತಿಗೆ ಮಾತ್ರ ಸೀಮಿತ ಗೊಳಿಸಿ ‘ಕನ್ನಡ ಡಿಂಡಿಮ’ ವನ್ನು ಸ್ಥಬ್ದಗೊಳಿಸುವ ನಾಡದ್ರೋಹಿ ಆದೇಶ ಹೊರಡಿಸಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ADVERTISEMENT

‘ಇದು ನಾಡು, ನುಡಿ, ಜನರ ಹಾಗೂ ನಾಡ ಗೀತೆ ರಚಿಸಿದ ಕುವೆಂಪು ಅವರಿಗೆ ಮಾಡಿದ ಅಪಮಾನವಾಗಿದೆ. ರಾಜ್ಯದಲ್ಲಿ ಇದುವರೆಗೂ ನಾಡಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಾಡಗೀತೆ ಹಾಡಿಸುವುದು ಕಡ್ಡಾಯವಿದ್ದ ಆದೇಶವನ್ನು ಬದಲಾವಣೆ ಮಾಡಿ ‘ಕೇವಲ ಸರ್ಕಾರಿ ಶಾಲೆಗಳಲ್ಲಿ, ಸರ್ಕಾರಿ ಸಂಸ್ಥೆಗಳಲ್ಲಿ ಮಾತ್ರ’ ನಾಡಗೀತೆ ಎಂಬ ಆದೇಶ ಹೊರಡಿಸಿ ನಾಡಗೀತೆಯ ವ್ಯಾಪ್ತಿಯನ್ನು ಮೊಟಕುಗೊಳಿಸಿರುವುದರ ಹಿಂದಿರುವ ಉದ್ದೇಶ ಖಾಸಗಿ ವಲಯ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಹಾಗೂ ಕರ್ನಾಟಕವನ್ನು ಅಲಕ್ಷಿಸುವ ಧೋರಣೆಯನ್ನು ಉತ್ತೇಜಿಸುವ ಕನ್ನಡ ದ್ರೋಹಿ ಕುತಂತ್ರವಾಗಿದೆ. ಕೂಡಲೇ ಈ ಆದೇಶ ಹಿಂಪಡೆದು ಸರ್ಕಾರ ಕನ್ನಡಿಗರ ಕ್ಷಮೆ ಕೇಳಲಿ’ ಎಂದು ಒತ್ತಾಯಿಸಿದ್ದಾರೆ.

ಎಲ್ಲಾ ಶಾಲೆಗಳಲ್ಲಿ (ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ) ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಡುವುದನ್ನು ಕಡ್ಡಾಯಗೊಳಿಸಿ ಇಂದು (ಬುಧವಾರ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿದ್ದುಪಡಿ ಆದೇಶ ಹೊರಡಿಸಿದೆ.

ಇದಕ್ಕೂ ಮುನ್ನ 2024ರ ಜನವರಿ 7ರಂದು ಹೊರಡಿದಸಿದ್ದ ಆದೇಶದಲ್ಲಿ ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪಾಧ್ರಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಾರಂಭದಲ್ಲಿ ಹಾಡಬೇಕು’ ಎಂದು ತಿಳಿಸಲಾಗಿತ್ತು. ಆದರೆ ಯಾವ ಶಾಲೆಗಳೆಂದು ನಿರ್ದಿಷ್ಟವಾಗಿ ಹೇಳಿರಲಿಲ್ಲ.

ವಿನಾಯಿತಿ ನೀಡುವುದು ಸರಿಯಲ್ಲ: ಶಿಕ್ಷಣ ತಜ್ಞ ನಿರಂಜನಾರಾಧ್ಯ

ನಾಡಗೀತೆ, ರಾಷ್ಟ್ರಗೀತೆ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ನೆಲದ ನಿಯಮ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಖಾಸಗಿ ಶಾಲೆಗಳಿಗೆ ವಿನಾಯಿತಿ ನೀಡುವುದು ಸರಿಯಲ್ಲ. ಇದು ನಾಡಗೀತೆಗೆ ಮಾತ್ರವಲ್ಲ, ಕನ್ನಡ ನಾಡಿನ ಜನತೆಗೆ ಮಾಡಿದ ಅವಮಾನ. ನಾಡಿನ ನೆಲ - ಜಲ ಬೇಕು ನಾಡಗೀತೆ ಬೇಡವೆಂದರೆ, ಒಪ್ಪಲು ಸಾಧ್ಯವಿಲ್ಲ. ಇದು ನಾಡ ದ್ರೋಹ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಅಸಮಾಧಾನ ಹೊರಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.