ADVERTISEMENT

ನೆಮ್ಮದಿಯ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ: ಸಿ.ಎಂ ಯಡಿಯೂರಪ್ಪ ಅಳಲು

ಸಿ.ಎಂ ಯಡಿಯೂರಪ್ಪ ಅಳಲು l ಸಿ.ಎಂ ಸ್ಥಾನಕ್ಕೆ ಫ್ರಂಟ್‌ ರನ್ನರ್ ಅಲ್ಲ–ಜೋಶಿ lಲಾಬಿ ಮಾಡೋಲ್ಲ –ನಿರಾಣಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 17:41 IST
Last Updated 24 ಜುಲೈ 2021, 17:41 IST
ಬಿ.ಎಸ್‌ ಯಡಿಯೂರಪ್ಪ
ಬಿ.ಎಸ್‌ ಯಡಿಯೂರಪ್ಪ    

ಶಿವಮೊಗ್ಗ: ‘ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿಯವರೆಗೂ ಹಲವು ಸವಾಲುಗಳನ್ನು ಎದುರಿಸಿದ್ದೇನೆ’ ಎಂದುಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಜಿಲ್ಲೆಯಲ್ಲಿ ₹1074 ಕೋಟಿ ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ, ₹ 560 ಕೋಟಿ ವೆಚ್ಚದ ಹಲವು ಯೋಜನೆಗಳಿಗೆ ಬೆಂಗಳೂರಿನ ಗೃಹ ಕಚೇರಿಯಿಂದ ವರ್ಚುಯಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಹಿಂದೆಂದೂ ಕಂಡಿರದ ಪ್ರಕೃತಿ ವಿಕೋಪ, ಕೊರೊನಾ ಸಂಕಷ್ಟದ ಸವಾಲುಗಳಲ್ಲೇ ಸಮಯ ಕಳೆಯಬೇಕಾಯಿತು.ಈಗ ಮತ್ತೆ ಪ್ರವಾಹದ ಪರಿಸ್ಥಿತಿ ಎದುರಿಸಬೇಕಿದೆ. ನೆಮ್ಮದಿಯಾಗಿ ಆಡಳಿತ ನಡೆಸಲು ಸಾಧ್ಯವಾಗಿಲ್ಲ’ ಎಂದು ಅವರು
ಅಳಲು ತೋಡಿಕೊಂಡರು.

ADVERTISEMENT

‘ಎರಡು ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಗರಿಷ್ಠ ಪ್ರಯತ್ನ ಮಾಡಿದ ತೃಪ್ತಿ ಇದೆ.ರೈತರ ಬದುಕು ಹಸನಾಗಿಸಲು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿರುವೆ. ಏತನೀರಾವರಿ ಯೋಜನೆಗಳಿಗೆ ದಾಖಲೆ ಪ್ರಮಾಣದ ಅನುದಾನ ನೀಡಿರುವೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವೆ’ ಎಂದು ಹೇಳಿದರು.

ಮಿತ್ರ ಮಂಡಳಿ ಇಲ್ಲ: ಬಿಜೆಪಿಯಲ್ಲಿ ಮಿತ್ರ ಮಂಡಳಿ ಇಲ್ಲ. 17 ಶಾಸಕರು ಬಿಜೆಪಿ ಟಿಕೆಟ್ ಪಡೆದು ಚುನಾವಣೆ ಎದುರಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ವಾರಾಣಸಿಗೆ ಹೋಗಿದ್ದು ದೇವರ ದರ್ಶನ‌ಕ್ಕಾಗಿ: ನಿರಾಣಿ

ಕಲಬುರ್ಗಿ: ‘ಪಕ್ಷದ ಎಲ್ಲ ಶಾಸಕರು ಮುಖ್ಯಮಂತ್ರಿ ಆಗಲು ಸಮರ್ಥರಿದ್ದಾರೆ. ಆದರೆ, ನಾನು ಲಾಬಿ ಮಾಡಿ ಮುಖ್ಯಮಂತ್ರಿ ಅನಿಸಿಕೊಳ್ಳಲು ಇಷ್ಟಪಡುವುದಿಲ್ಲ’ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

‘ಮುಖ್ಯಮಂತ್ರಿ ಬದಲಾವಣೆ ಕುರಿತು ಏನನ್ನೂ ಹೇಳಲಾರೆ. ಹೈಕಮಾಂಡ್ ನಿರ್ಧರಿಸಲಿದೆ. ನಾನು ವಾರಾಣಸಿಗೆ ಹೋಗಿದ್ದು ದೇವರ ದರ್ಶನ‌ಕ್ಕಾಗಿ. ಪ್ರತಿ ತಿಂಗಳು ಒಂದೊಂದು ದೇವಸ್ಥಾನಕ್ಕೆ ಹೋಗುತ್ತೇನೆ’ ಎಂದು ಅವರು ಶನಿವಾರ ಇಲ್ಲಿ ಪ್ರತಿಕ್ರಿಯಿಸಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರನ್ನು ಭೇಟಿಯಾಗಿದ್ದ ನಿರಾಣಿ, ಕೆಲಹೊತ್ತು ಗೋಪ್ಯ ಮಾತುಕತೆ ನಡೆಸಿದರು. ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಜೊತೆಗೂ ಗೋಪ್ಯವಾಗಿ ಚರ್ಚಿಸಿದರು.

ನಂತರ ಸೇಡಂ ಅವರನ್ನು ಭೇಟಿಯಾದ ಶಾಸಕ ಬಸವರಾಜ ಮತ್ತಿಮೂಡ, ಮೇಲ್ಮನೆ ಸದಸ್ಯ ಶಶೀಲ್‌ ಜಿ. ನಮೋಶಿ, ‘ನಿರಾಣಿ ಸಾಹೇಬರಿಗೆ ನಿಮ್ಮ ಆಶೀರ್ವಾದ ಬೇಕು’ ಎಂದು ಸೇಡಂ ಅವರನ್ನು ಕೋರಿದರು.

‘ಗುರುಪೌರ್ಣಿಮೆ ಅಂಗವಾಗಿ ಹಿರಿಯರು ಹಾಗೂ ಗುರುಗಳ ಆಶೀರ್ವಾದ ‍ಪಡೆದಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ’ ಎಂದು ನಿರಾಣಿ ಅವರು ಪ್ರತಿಕ್ರಿಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ, ‘ನಾನು ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವನಾದ ನಂತರ ನನಗೆ ರೆಡ್‌ಕಾರ್ಪೆಟ್‌ ಸ್ವಾಗತ ಸಿಕ್ಕಂತಾಗಿದೆ’ ಎಂದು ಸೂಚ್ಯವಾಗಿ ಹೇಳಿದರು.

ಕಾದು ನೋಡ ಬೇಕಿದೆ: ಶೆಟ್ಟರ್

ಹುಬ್ಬಳ್ಳಿ: ‘ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಸ್ಪಷ್ಟತೆಯಿಲ್ಲ. ಕಾದು ನೋಡಬೇಕಿದೆ’ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸಿ.ಎಂ ಬದಲಾವಣೆ ಕುರಿತು ನನಗೆ ಮಾಹಿತಿ ಇಲ್ಲ. ವರಿಷ್ಠರನ್ನು ಭೇಟಿಯಾಗಲು ನಾನು ದೆಹಲಿಗೆ ಹೋಗಿಲ್ಲ. ಇಲಾಖೆಯ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಗುಜರಾತ್-ದೆಹಲಿಗೆ ತೆರಳಿದ್ದೆ’ ಎಂದು ತಿಳಿಸಿದರು.

‘ಸಿ.ಎಂ.ಸ್ಥಾನಕ್ಕೆ ಸ್ಪರ್ಧಿ ಅಲ್ಲ’

ಹುಬ್ಬಳ್ಳಿ: ‘ಮುಖ್ಯಮಂತ್ರಿ ಸ್ಥಾನಕ್ಕೆ ಫ್ರಂಟ್ ರನ್ನರ್ರೂ ಅಲ್ಲ ಬ್ಯಾಕ್ ರನ್ನರ್ರೂ ಅಲ್ಲ. ವರಿಷ್ಠರು ಈ ಬಗ್ಗೆ ನನ್ನ ಜತೆ ಯಾವುದೇ ಚರ್ಚೆ ಮಾಡಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ನಿರ್ಧರಿಸುತ್ತಾರೆ’ ಎಂದು ತಿಳಿಸಿದರು.

‘ಬಿ.ಎಸ್. ಯಡಿಯೂರಪ್ಪ ಮತ್ತು ವರಿಷ್ಠರ ಮಧ್ಯೆ ಏನೆಲ್ಲ ಮಾತುಕತೆ ನಡೆದಿದೆ. ಯಡಿಯೂರಪ್ಪ ಅವರಿಗೆ ರಾಜೀನಾಮೆ ನೀಡಿ ಎಂದು ಹೇಳಿದ್ದಾರೋ, ಇಲ್ಲವೋ ಎನ್ನುವುದು ತಮಗೆ ಗೊತ್ತಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.