ADVERTISEMENT

ಮೇಕೆದಾಟು ಪಾದಯಾತ್ರೆ: ಕಾಂಗ್ರೆಸ್ ಹೋರಾಟ ಯಾರ ವಿರುದ್ಧ? -ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 5:09 IST
Last Updated 28 ಫೆಬ್ರುವರಿ 2022, 5:09 IST
ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಪ್ರಾದೇಶಿಕ ಆಯುಕ್ತ  ಅಮ್ಲಾನ್ ಆದಿತ್ಯ ಬಿಸ್ವಾಸ್ ಇದ್ದಾರೆ
ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಇದ್ದಾರೆ   

ಬೆಳಗಾವಿ: 'ಮೇಕೆದಾಟು ಯೋಜನೆಯ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಹೀಗಿರುವಾಗ ಕಾಂಗ್ರೆಸ್‌ನವರು ಪಾದಯಾತ್ರೆ ಹೋರಾಟ ನಡೆಸುತ್ತಿರುವುದು ಯಾರ ವಿರುದ್ಧ ಎನ್ನುವುದನ್ನು ಸ್ಪಷ್ಟಪಡಿಸಲಿ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸವಾಲು ಹಾಕಿದರು.

ಇಲ್ಲಿ ಪತ್ರಿಕಾಗೋಷ್ಠಿ ಸೋಮವಾರ ಮಾತನಾಡಿದ ಅವರು, 'ಕಾಂಗ್ರೆಸ್ 2ನೇ ಹಂತದ ಪಾದಯಾತ್ರೆ ನಡೆಸುತ್ತಿದೆ. ಆ ಪಕ್ಷದ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರೂ ಪಾಲ್ಗೊಂಡಿರುವುದು ಬಹಳ ಅಚ್ಚರಿ ತರಿಸಿದೆ' ಎಂದರು.

'ಐದು ವರ್ಷಗಳವರೆಗೆ ಅಧಿಕಾರದಲ್ಲಿದ್ದಾಗ ಏನನ್ನೂ ಮಾಡದ ಕಾಂಗ್ರೆಸ್‌ನವರು,ಈಗ ಪಾದಯಾತ್ರೆಯ ನಾಟಕ ಮಾಡುತ್ತಿದ್ದಾರೆ. ಸುಳ್ಳನ್ನೆ ಬಂಡವಾಳ ಮಾಡಿಕೊಂಡು ಏನೇನೋ ಮಾತನಾಡುವುದನ್ನು ಮುಂದುವರಿಸಿದ್ದಾರೆ. ವಿಶೇಷವಾಗಿ ನನ್ನನ್ನೆ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ.

ADVERTISEMENT

'ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಟೀಕಿಸಿದ್ದಾರೆ. ಒಬ್ಬ ಹಿರಿಯ ರಾಜಕಾರಣಿ ಬಗ್ಗೆ ಮಾತನಾಡುವಾಗ, ಆ ಪಕ್ಷದ ನಾಯಕರು ವಿವೇಚನೆ ಬಳಸಬೇಕು. ಅವರ ಸುಳ್ಳುಗಳನ್ನೆಲ್ಲ ನಂಬುವ ಸ್ಥಿತಿಯಲ್ಲಿ ಜನರಿಲ್ಲ ಎನ್ನುವುದನ್ನು ಅರಿಯಬೇಕು' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.

ಅವರೂ ಹೊಟ್ಟೆಪಾಡಿಗಾಗಿ ಬೇರೆ ಪಕ್ಷಗಳಿಗೆ ಬಂದಿದ್ದಾರೆಯೇ ಎಂದು ಕೇಳಿದರು.

'ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ಮಾಡಿದರು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಏನನ್ನೂ ಮಾಡಲಿಲ್ಲ. ಅವರು ಕ್ರಮ ವಹಿಸಿದ್ದಿದ್ದರೆ ಈವರೆಗೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯವಾದರೂ ಮುಗಿಯುತ್ತಿತ್ತು. ಆದರೆ ಅದನ್ನೂ ಮಾಡಲಿಲ್ಲ. ಐದು ವರ್ಷಗಳಲ್ಲಿ ಐವತ್ತು ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ ಎಂದು ಹೇಳಿದ್ದರು. ಆದರೆ, ಆ ಮಾತಿನಂತೆ ನಡೆದುಕೊಳ್ಳಲಿಲ್ಲ. ಈ ಮೋಸದಾಟವನ್ನು ಕಾಂಗ್ರೆಸ್‌ನವರು ಬಿಡಬೇಕು. ಕೃಷ್ಣೆಯ ನೀರಿನ‌ ಬಳಕೆ ಕುರಿತಂತೆ ಮಾಡಿದ್ದ ಪ್ರಮಾಣ ಏನಾಯಿತು ಎನ್ನುವುದಕ್ಕೆ ಉತ್ತರ ಕೊಡಬೇಕು' ಎಂದು ಸವಾಲು ಹಾಕಿದರು.

'ಮಹದಾಯಿ, ಕೃಷ್ಣಾ ಹಾಗೂ ಮೇಕೆದಾಟು ಯೋಜನೆಗಳನ್ನು ಮಾಡೇ ತೀರುತ್ತೇವೆ. ಈ ಬಗ್ಗೆ ಮಾತನಾಡುವುದಕ್ಕೆ ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ' ಎಂದರು.

'ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಕ್ರಮ ವಹಿಸಲಾಗಿದೆ. ಜಿಲ್ಲೆಯ 12 ವಿದ್ಯಾರ್ಥಿಗಳು ಅಲ್ಲಿ ಸಿಲುಕಿರುವ ಮಾಹಿತಿ ಇದೆ. ಅವರ ಸುರಕ್ಷತೆಯ ದೃಷ್ಟಿಯಿಂದ ಸಮನ್ವಯ ಮಾಡುವುದಕ್ಕಾಗಿ ಪ್ರವೀಣ್ ಬಾಗೇವಾಡಿ ಹಾಗೂರವೀಂದ್ರ ಕರಲಿಂಗಣ್ಣವರ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಅವರು ಈಗಾಗಲೇಮುಂಬೈ ತಲುಪಿದ್ದಾರೆ. ಪೋಷಕರುಆತಂಕಕ್ಕೆ ಒಳಗಾಗಬೇಕಿಲ್ಲ. ಎಲ್ಲರನ್ನೂಸುರಕ್ಷಿತವಾಗಿ ಕರೆ ತರಲು ನಮ್ಮ ಸರ್ಕಾರಗಳು ಕ್ರಮ‌ ವಹಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಕಾಳಜಿ ವಹಿಸಿದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.