ADVERTISEMENT

ರಾಜಕುಮಾರ್ ಪಾಟೀಲ ತೇಲ್ಕೂರ ಬ್ಲ್ಯಾಕ್‌ಮೇಲ್ ಕೇಸ್: ವಿಚಾರಣೆಗೆ ಮಹಿಳೆ ಹಾಜರು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 20:59 IST
Last Updated 8 ಫೆಬ್ರುವರಿ 2022, 20:59 IST
   

ಬೆಂಗಳೂರು: ‘ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ’ ಎನ್ನಲಾದ ಪ್ರಕರಣದ ವಿಚಾರಣೆಗೆ ಆರೋಪಿತ ಮಹಿಳೆ ಮಂಗಳವಾರ ಹಾಜರಾದರು.

‘₹ 2 ಕೋಟಿ ನೀಡುವಂತೆ ಮಹಿಳೆಯೊಬ್ಬರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಶಾಸಕ ನೀಡಿದ್ದ ದೂರಿನನ್ವಯ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಪ್ರಕರಣ ಸಂಬಂಧ ಮಹಿಳೆ ಹಾಗೂ ಇತರರನ್ನು ಇತ್ತೀಚೆಗೆ ವಿಚಾರಣೆ ನಡೆಸಲಾಗಿತ್ತು. ಮಹಿಳೆಯಿಂದ ಮತ್ತಷ್ಟು ಮಾಹಿತಿ ಕಲೆಹಾಕಬೇಕಿದ್ದು, ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಠಾಣೆಗೆ ಬೆಳಿಗ್ಗೆ ಬಂದಿದ್ದ ಮಹಿಳೆಯನ್ನು ಕೆಲ ಗಂಟೆ ವಿಚಾರಣೆ ನಡೆಸಲಾಯಿತು’ ಎಂದೂ ತಿಳಿಸಿವೆ. ‘ಶಾಸಕರಿಂದಲೇ ಮಗು ಹುಟ್ಟಿದ್ದು, ಜೀವನಾಂಶ ಕೇಳಿದ್ದಕ್ಕೆ ಈ ರೀತಿ ಸುಳ್ಳು ಆರೋಪ ಮಾಡಲಾಗುತ್ತಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಮಹಿಳೆ ಹೇಳಿರುವುದಾಗಿ ಗೊತ್ತಾಗಿದೆ.

ಕಮಿಷನರ್‌ ಕಚೇರಿಗೆ ಶಾಸಕ ಭೇಟಿ: ಮಹಿಳೆ ಠಾಣೆಗೆ ಹಾಜರಾದ ಬೆನ್ನಲ್ಲೇ, ರಾಜಕುಮಾರ್ ಪಾಟೀಲ ತೇಲ್ಕೂರ ಅವರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದರು.

ಕಮಿಷನರ್ ಕಮಲ್ ಪಂತ್ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ಅವರನ್ನು ಭೇಟಿಯಾಗಲು ಶಾಸಕರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ, ಕಚೇರಿಯಿಂದ ವಾಪಸು ಹೋದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ರಾಜಕುಮಾರ್ ಪಾಟೀಲ ತೇಲ್ಕೂರ, ‘ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದರ ಪ್ರಗತಿ ತಿಳಿಯಲು ಕಮಿಷನರ್‌ ಕಚೇರಿಗೆ ಬಂದಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.