ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ ಕಳಪೆ ರಸ್ತೆಗಳಿಂದ ಈಗ ಗುಂಡಿಗಳ ಸಮಸ್ಯೆ ಎದುರಾಗಿದೆ. ಇದಕ್ಕೆ ಬೆಂಗಳೂರು ನಗರ ವ್ಯಾಪ್ತಿಯ ಬಿಜೆಪಿ ಶಾಸಕರೇ ಹೊಣೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 2019–23ರ ಅವಧಿಯಲ್ಲಿ ಬಿಜೆಪಿ ಆಡಳಿತ ಇತ್ತು. ಬಿಜೆಪಿ ಶಾಸಕರು ನಗರದ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಪಡೆದಿದ್ದರು. ಅಷ್ಟೊಂದು ಹಣ ಬಿಡುಗಡೆಯಾದರೂ ಗುಣಮಟ್ಟದ ರಸ್ತೆಗಳ ನಿರ್ಮಾಣ ಮಾಡಲಿಲ್ಲ. ಅವುಗಳ ನಿರ್ವಹಣೆಯಲ್ಲೂ ವಿಫಲರಾದರು ಎಂದು ದೂರಿದರು.
2019ರಲ್ಲಿ ನವನಗರೋತ್ಥಾನ ಯೋಜನೆಯಡಿ ಬಿಡುಗಡೆಗೊಂಡ ಕ್ಷೇತ್ರವಾರು ಅನುದಾನಗಳ ವಿವರವನ್ನು ಬಿಡುಗಡೆ ಮಾಡಿದ ಸಚಿವ ರೆಡ್ಡಿ, ‘ಈ ಅನುದಾನದಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಬಿಜೆಪಿ ಶಾಸಕರು ₹6,116.73 ಕೋಟಿ ಪಡೆದಿದ್ದರು. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ನೀಡಿದ್ದು ₹1,105 ಕೋಟಿ. ಹೆಚ್ಚು ಅನುದಾನ ಪಡೆದಿದ್ದರೂ ಗುಣಮಟ್ಟವಿಲ್ಲದ ಕಾಮಗಾರಿ ಮಾಡಿದ್ದಾರೆ. ಅದೇ ಕಡಿಮೆ ಅನುದಾನ ಪಡೆದ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ರಸ್ತೆಗಳು ಉತ್ತಮ ಗುಣಮಟ್ಟದಿಂದ ಕೂಡಿವೆ. ರಸ್ತೆ ಅಭಿವೃದ್ಧಿಗೆ ನೀಡಿದ್ದ ಹಣವನ್ನು ಬಿಜೆಪಿ ಶಾಸಕರು ಏನು ಮಾಡಿದರು ಎಂಬ ದಾಖಲೆಗಳನ್ನು ಬಿಡುಗಡೆ ಮಾಡಬೇಕು’ ಎಂದು ಸವಾಲು ಹಾಕಿದರು.
‘ಒಮ್ಮೆ ರಸ್ತೆ ನಿರ್ಮಾಣವಾದರೆ ಕನಿಷ್ಠ ಹತ್ತು ವರ್ಷ ಬಾಳಿಕೆ ಬರಬೇಕು. ಗುಂಡಿ ಸೇರಿದಂತೆ ಮೂರು ವರ್ಷಗಳವರೆಗೆ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕು ಎಂಬ ನಿಯಮವಿದೆ. ಬಿಜೆಪಿ ಆಡಳಿತ ಇದ್ದಾಗ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಿಲ್ಲ. ನಿರ್ವಹಣೆಯನ್ನೂ ಮಾಡಲಿಲ್ಲ. ಗುಂಡಿಗಳಿಗೆ ಬಿದ್ದು 17 ಮಂದಿ ಬೈಕ್ ಸವಾರರು ಮೃತಪಟ್ಟಿದ್ದರು. ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅವರೇ ಬಿಬಿಎಂಪಿ ಆಯುಕ್ತರನ್ನು ಕೋರ್ಟ್‌ಗೆ ಕರೆಯಿಸಿದ್ದರು. ಈಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನೆಯ ಸಮೀಪ ಸೇರಿದಂತೆ ಅನೇಕ ರಸ್ತೆಗಳಲ್ಲಿ ಗುಂಡಿ ತುಂಬುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ಮಣ್ಣಿನಿಂದ ತುಂಬುವುದಕ್ಕಿಂತ ಕಲ್ಲು–ಜಲ್ಲಿಯಿಂದಾದರೂ ತುಂಬಲಿ. ತಮ್ಮ ಅವಧಿಯಲ್ಲಿ ಮಾಡಿದ ಕಳಪೆ ಕಾಮಗಾರಿಗಳಿಗೆ ನ್ಯಾಯ ಒದಗಿಸಲಿ’ ಎಂದು ಸಲಹೆ ನೀಡಿದರು.
ಬೆಂಗಳೂರು ನಗರದಲ್ಲಿ 1.40 ಕೋಟಿ ಜನರಿಗೆ, 1.30 ಕೋಟಿ ವಾಹನಗಳಿವೆ. ಮಳೆ ಹೆಚ್ಚಾಗಿ ಗುಂಡಿಗಳ ಸಂಖ್ಯೆಯೂ ಹೆಚ್ಚಾಗಿದೆ. ಮುಖ್ಯಮಂತ್ರಿ ಸಭೆ ನಡೆಸಿ, ಒಂದು ತಿಂಗಳ ಒಳಗೆ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಿದ್ದಾರೆ. ಉಪಮುಖ್ಯಮಂತ್ರಿ ನಿರಂತರವಾಗಿ ಗಮನಹರಿಸುತ್ತಿದ್ದಾರೆ. ಭೂಗತ ಒಳಚರಂಡಿ, ವಿದ್ಯುತ್ ಕಾಮಗಾರಿಗಳ ಪರಿಣಾಮ ಒಂದಷ್ಟು ಸಮಸ್ಯೆ ಎದುರಾಗಿದೆ ಎಂದರು.
ಪ್ರಧಾನಮಂತ್ರಿಗೆ ಒತ್ತಡ ಹಾಕಲು ಸಲಹೆ
ಹಿಂದೂ ದೇವಾಲಯವನ್ನು ರಾಜ್ಯ ಸರ್ಕಾರದ ಅಧೀನಕ್ಕೆ ತರಬಾರದು ಎಂಬ ಕಾನೂನು ರೂಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು. ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿರುವ ವಿಶ್ವ ಹಿಂದೂ ಪರಿಷತ್ ನಿಯೋಗ ಈ ಬಗ್ಗೆ ಒತ್ತಾಯಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ ರೆಡ್ಡಿ ಅವರು ದೇಶದ ಎಲ್ಲೆಡೆ ಅನ್ವಯವಾಗುವಂತೆ ಏಕರೂಪದ ಕಾಯ್ದೆ ರೂಪಿಸಬೇಕು. ವಿಶ್ವ ಹಿಂದೂ ಪರಿಷತ್ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಸಲಹೆ ನೀಡಿದರು. ಧರ್ಮಸ್ಥಳ ಸೇರಿದಂತೆ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಮುಜರಾಯಿ ವ್ಯಾಪ್ತಿಗೆ ತರುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ಯಾರೂ ಒತ್ತಡ ಹಾಕಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.