ADVERTISEMENT

ಕೋವಿಡ್‌ ಲಸಿಕೆ ಕುರಿತು ಜನರ ದಾರಿ ತಪ್ಪಿಸಿದ ಕಾಂಗ್ರೆಸ್: ತೇಜಸ್ವಿ ಸೂರ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಮೇ 2021, 12:24 IST
Last Updated 20 ಮೇ 2021, 12:24 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ   

ಬೆಂಗಳೂರು: ‘ಕೋವಿಡ್‌ ಲಸಿಕೆ ವಿರುದ್ಧ ಕಾಂಗ್ರೆಸ್‌ ಪಕ್ಷ ನಡೆಸಿದ ಅಪಪ್ರಚಾರ ಜನರ ದಾರಿ ತಪ್ಪಿಸಿದೆ’ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜನಪ್ರತಿನಿಧಿಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೋವಿಡ್‌ ಎರಡನೇ ಅಲೆ ಆರಂಭವಾಗುವ ವೇಳೆ ದೇಶದ ಎಲ್ಲ ಜನರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ಹೋರಾಟ ಮಾಡುತ್ತಿದ್ದರೆ, ಕಾಂಗ್ರೆಸ್‌ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಸಿತು. ಇದರಿಂದ ದೊಡ್ಡ ಹಿನ್ನಡೆ ಆಯಿತು. ಜನ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಲಿಲ್ಲ ಎಂದರು.

ADVERTISEMENT

ಮಾರ್ಚ್‌ 17 ರಂದು ಪ್ರಧಾನಿ ಮೋದಿ ಎಲ್ಲರಿಗೂ ಎರಡನೇ ಅಲೆಯ ಸೂಚನೆ ನೀಡಿ ಅದಕ್ಕೆ ಸೂಕ್ತ ತಯಾರಿ ನಡೆಸಿಕೊಳ್ಳಲು ತಿಳಿಸಿದ್ದರು. ಪ್ರತಿ ಹಂತದಲ್ಲೂ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆಗ ನಮ್ಮ ಬಳಿ ಇದ್ದ ಅಸ್ತ್ರ ಕೋವಿಡ್ ಲಸಿಕೆ. ಆಗ ದೊಡ್ಡ ಪ್ರಮಾಣದಲ್ಲಿ ಲಸಿಕೆ ಇದ್ದದ್ದು ಭಾರತದ ಬಳಿ ಮಾತ್ರ, ಬೇರೆ ಯಾವ ದೇಶದ ಬಳಿಯೂ ಇರಲಿಲ್ಲ ಎಂದರು.

ಮೊದಲ ಅಲೆಯ ಆರಂಭದಲ್ಲಿ ವೈದ್ಯರು, ನರ್ಸ್‌ಗಳಿಗೆ ಲಸಿಕೆ ಇರಲಿಲ್ಲ. ಎರಡನೇ ಅಲೆ ಆರಂಭವಾಗುವ ವೇಳೆಗೆ ಲಸಿಕೆ ಸಿಕ್ಕಿತ್ತು. ಕೋವಿಡ್‌ ವಾರಿಯರ್‌ಗಳಿಗೆ, ಹಿರಿಯ ನಾಗರಿಕರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಬೇರೆ ಯಾವುದೇ ದೇಶ ಇಷ್ಟು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿರಲಿಲ್ಲ ಎಂದರು.

ಆದರೆ ಕಾಂಗ್ರೆಸ್ ಮಾಡಿದ್ದೇನು? ಲಸಿಕೆ ಬಗ್ಗೆ ಆರಂಭದಲ್ಲೇ ಸಂಶಯದ ಬೀಜ ಬಿತ್ತಲು ವ್ಯವಸ್ಥಿತ ಹುನ್ನಾರ ನಡೆಸಿತು. ಲಸಿಕೆಯ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಿದ್ದೂ ಅಲ್ಲದೆ, ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದು ಹೆಸರಿಸಿ ಬೇಜವಾಬ್ದಾರಿಯಿಂದ ನಡೆದುಕೊಂಡಿತು. ಇವರು ಆಷಾಡಭೂತಿಗಳು ಎಂದು ಹೇಳಿದರು.

ಕೋವಿಡ್‌ ಸಂದರ್ಭದಲ್ಲಿ ಬಿಜೆಪಿಯ ಎಲ್ಲ ಸಂಸದರು ಆಮ್ಲಜನಕ, ಔಷಧ, ಲಸಿಕೆ ಮತ್ತು ಇತರ ಸೌಲಭ್ಯವನ್ನು ತರಿಸಲು ಕೇಂದ್ರದ ಜತೆ ನಿರಂತರ ಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.