ಬಿ.ವೈ.ವಿಜಯೇಂದ್ರ
ಬೆಂಗಳೂರು: ‘ಕೋಗಿಲು ಸಮೀಪ ಅಕ್ರಮ ಕಟ್ಟಡಗಳ ನೆಲಸಮ ವಿಚಾರದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅಲ್ಲಿನ ಸಂಸದ ಕೆ.ಸಿ.ವೇಣುಗೋಪಾಲ್ ಅವರು ಮಧ್ಯೆ ಪ್ರವೇಶಿಸಿರುವುದು ಖಂಡನೀಯ’ ಎಂದು ಬಿಜೆಪಿ ರಾಜ್ಯ ಘಟಕದ ನಾಯಕರು ಆಕ್ಷೇಪಿಸಿದ್ದಾರೆ.
‘ಅಕ್ರಮವಾಗಿ ಮನೆ ಕಟ್ಟಿಕೊಂಡ ಮುಸ್ಲಿಮರ ಪರವಾಗಿ ಕೇರಳದ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ನಾಯಕರು ಒಂದಾಗಿದ್ದಾರೆ. ಕರ್ನಾಟಕದ ವಿಷಯದಲ್ಲಿ ತಲೆ ಹಾಕಲು ಇವರು ಯಾರು? ಒಂದು ಕಡೆ ಪಿಣರಾಯಿ ವಿಜಯನ್‌ಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆ.ಸಿ.ವೇಣುಗೋಪಾಲ್‌ಗೆ ಅದೇ ರೀತಿ ತಿರುಗೇಟು ಏಕೆ ನೀಡಿಲ್ಲ’ ಎಂದೂ ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಕುರಿತು ‘ಎಕ್ಸ್’ ಮಾಡಿದ್ದು, ‘ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಆಯ್ಕೆ ಮಾಡಿರುವುದು ಕರ್ನಾಟಕದವರಾ ಅಥವಾ ಕೇರಳದವರಾ? ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡು ಕೇರಳದ ಮುಖ್ಯಮಂತ್ರಿಗೆ ಉತ್ತರ ನೀಡಿರುವ ನೀವು ಎಐಸಿಸಿಯ ನಿಮ್ಮ ಬಾಸ್ ವೇಣುಗೋಪಾಲ್ ಅವರಿಗೆ ಅದೇ ಧಾಟಿಯಲ್ಲಿ ಉತ್ತರ ನೀಡುವ ಧೈರ್ಯ ಮತ್ತು ತಾಕತ್ತು ಇದೆಯಾ ಅಥವಾ ದೆಹಲಿಯಿಂದ ಕರೆ ಬಂದ ಬಳಿಕ ನಿಮ್ಮ ನಿಲುವು ಬದಲಿಸಿದ್ದೀರಾ’ ಎಂದೂ ಅವರು ಪ್ರಶ್ನಿಸಿದ್ದಾರೆ.
‘ದೆಹಲಿಯಲ್ಲಿ ತೆರೆಮರೆಯಲ್ಲಿ ಕುಳಿತು ನಿರ್ದೇಶನ ನೀಡುವವರು ನಿಮ್ಮನ್ನು ಗೆಲ್ಲಿಸಿದ್ದಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಕುರ್ಚಿ ಕದನದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಏನಾಗಬೇಕು ಎಂಬ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ದೆಹಲಿಯೇ ಹೊರತು ಬೆಂಗಳೂರು ಅಲ್ಲ’ ಎಂದು ಕುಟುಕಿದ್ದಾರೆ.
‘ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿನ ಕಾಣದ ಕೈಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದರಿಂದ ಆಡಳಿತ ಯಂತ್ರ ಕುಸಿದು ಹೋಗಿದೆ ಮತ್ತು ‘ರಿಮೋಟ್ ಕಂಟ್ರೋಲ್’ ಮಾತುಗಳೇ ನಡೆಯುತ್ತಿದೆ. ಕರ್ನಾಟಕಕ್ಕೆ ಉತ್ತರದಾಯಿತ್ವ ಇರುವ ನಾಯಕತ್ವ ಬೇಕೇ ಹೊರತು, ಹೈಕಮಾಂಡ್‌ನ ಕೀಲಿ ಕೊಟ್ಟ ಬೊಂಬೆಯಂತೆ ಕುಣಿಯುವವರು ಬೇಕಿಲ್ಲ’ ಎಂದು ವಿಜಯೇಂದ್ರ ಹೇಳಿದ್ದಾರೆ.
ಕೇರಳ ಚುನಾವಣೆಯಲ್ಲಿ ಮುಸ್ಲಿಮರ ಮತ ದಕ್ಕಿಸಿಕೊಳ್ಳಲು ಅಕ್ರಮ ಮನೆಗಳ ಧ್ವಂಸ ಪ್ರಕರಣವನ್ನು ಅಲ್ಲಿನ ರಾಜಕಾರಣಿಗಳು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಪ್ರಧಾನಕಾರ್ಯದರ್ಶಿ ವಿ.ಸುನಿಲ್‌ಕುಮಾರ್ ಆರೋಪಿಸಿದ್ದಾರೆ.
‘ಈ ಹಿಂದೆ ವಯನಾಡಿನಲ್ಲಿ ಆನೆ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಗೆ ₹30 ಲಕ್ಷ ಪರಿಹಾರ ನೀಡಿದ್ದ ರಾಜ್ಯ ಸರ್ಕಾರ, ಈಗ ಕೇರಳ ಚುನಾವಣೆ ಕಾರಣಕ್ಕೆ ರಾಜ್ಯದ ಮರ್ಯಾದೆಯನ್ನೇ ಬೀದಿ ಪಾಲು ಮಾಡಿದೆ. ಕರ್ನಾಟಕದ ಬಂಡೆ ಸರ್ಕಾರವನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರ ಬುಲ್ಡೋಜರ್ ಅಡಿಯಲ್ಲಿ ಹಾಕಿ ರೋಲ್ ಮಾಡಿದರೂ ಸಹಿಸಿಕೊಂಡಿರುವ ಕಾಂಗ್ರೆಸ್‌ನ ‘ವೀರಕನ್ನಡಿಗರಿಗೆ’ ಭೇಷ್ ಅನ್ನಲೇ ಬೇಕು ಬಿಡಿ’ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.