ADVERTISEMENT

ಲೋಕಸಭಾ ಚುನಾವಣೆ: ಬಿಜೆಪಿ ಪಟ್ಟಿ ಪ್ರಕಟಣೆಗೆ ಮುನ್ನವೇ ಸೆಡವು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 0:38 IST
Last Updated 10 ಮಾರ್ಚ್ 2024, 0:38 IST
ಬಿಜೆಪಿ ಚಿಹ್ನೆ
ಬಿಜೆಪಿ ಚಿಹ್ನೆ   
ಬೆಂಗಳೂರು: ಲೋಕಸಭೆಗೆ ಚುನಾವಣೆಯ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಆಖೈರುಗೊಳಿಸಲು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ಭಾನುವಾರ ನಡೆಯಲಿದ್ದು, ಅದಕ್ಕೆ ಮುನ್ನವೇ ಆಕಾಂಕ್ಷಿಗಳ ಅಬ್ಬರ–ಸೆಡವು ಜೋರಾಗಿದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದರೆ, ಕೆಲವು ಸಂಸದರು ತಮಗೆ ಟಿಕೆಟ್ ಸಿಗಲಿದೆ ಎಂದು ‍ಪ್ರತಿಪಾದಿಸಿದ್ದಾರೆ. ಟಿಕೆಟ್ ಸಿಗದಿದ್ದರೆ ತಮ್ಮ ದಾರಿ ನೋಡಿಕೊಳ್ಳುತ್ತೇವೆ ಎಂದು ಆಕಾಂಕ್ಷಿಗಳಾದ ಕೆಲವು ಮಾಜಿ ಶಾಸಕರು ಬೆದರಿಕೆಯ ಧಾಟಿಯಲ್ಲಿ ಮಾತನಾಡಿದ್ದಾರೆ

ನಾನೂ ಟಿಕೆಟ್‌ ಆಕಾಂಕ್ಷಿ: ಡಿ.ವಿ.ಸದಾನಂದ ಗೌಡ

‘ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿ ಯಾಗಿದ್ದೇನೆ. ನನಗೇ ಟಿಕೆಟ್‌ ಸಿಗುವ ವಿಶ್ವಾಸವಿದೆ’ ಎಂದು ಈ ಕ್ಷೇತ್ರದ ಹಾಲಿ ಸಂಸದ ಡಿ.ವಿ.ಸದಾನಂದ ಗೌಡ ಶನಿವಾರ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬೇರೆಯವರಿಗೆ ಟಿಕೆಟ್‌ ಕೊಡಿ ಎಂದು ಹಿಂದೆ ಹೇಳಿದ್ದೆ. ಕ್ಷೇತ್ರದ ಶಾಸಕರು, ಮುಖಂಡರು ನೀವೇ ಅಭ್ಯರ್ಥಿಯಾಗಿ ಎಂದು ಒತ್ತಾಯಿಸಿದ್ದರು. ಹೀಗಾಗಿ, ಟಿಕೆಟ್‌ ಬಯಸಿದ್ದೇನೆ’ ಎಂದರು.

‘ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಬಿ.ಎಸ್‌.ಯಡಿಯೂರಪ್ಪ ಅವರ ನಂತರದಲ್ಲಿ ನನಗೆ ಹೆಚ್ಚು ಅವಕಾಶಗಳನ್ನು ನೀಡಿದೆ. ಆದರೆ, ಈಗ ಟಿಕೆಟ್‌ ಕೊಡದೇ ಇದ್ದರೆ ಸ್ವಲ್ಪ ನೋವಾಗುತ್ತದೆ’ ಎಂದು ಹೇಳಿದರು.

ADVERTISEMENT

ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌: ಬಿ.ವೈ. ವಿಜಯೇಂದ್ರ

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಇರುವ, ಉತ್ತಮ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಬಿ.ವೈ. ವಿಜಯೇಂದ್ರ ಹೇಳಿದರು.

ಮೈಸೂರು ಸೇರಿದಂತೆ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ ಸಂಸದರ ಬದಲಿಗೆ ಬೇರೆಯವರಿಗೆ ಟಿಕೆಟ್‌ ನೀಡಲಾಗುತ್ತಿದೆ ಎಂಬ ಚರ್ಚೆ ಕುರಿತು ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಯಾವುದೇ ಊಹಾಪೋಹಗಳಿಗೆ ನಾನು ಉತ್ತರಿಸುವುದಿಲ್ಲ. ನಾಲ್ಕು ಗೋಡೆಗಳ ಮಧ್ಯೆ ನಡೆದ ಚರ್ಚೆಯನ್ನು ಬಹಿರಂಗಪಡಿಸಲೂ ಆಗುವುದಿಲ್ಲ’ ಎಂದರು.

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಳಂಬವಾಗಿಲ್ಲ. ಎರಡು ಹಂತಗಳಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸುವ ಸಾಧ್ಯತೆ ಇದೆ. ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವ ಗುರಿಯೊಂದಿಗೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್‌. ಮಂಜುನಾಥ್‌ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ‘ಮಂಜುನಾಥ್‌ ಸ್ಪರ್ಧೆ ಕುರಿತು ನಿಮ್ಮಿಂದಲೇ ನನಗೆ ಮಾಹಿತಿ ಸಿಗುತ್ತಿದೆ. ಅವರೂ ಸೇರಿದಂತೆ ಯಾರೇ ಬಿಜೆಪಿ ಅಭ್ಯರ್ಥಿಯಾದರೂ ಗೆಲ್ಲಿಸುತ್ತೇವೆ’ ಎಂದರು.

ಅಧಿಕಾರ ತ್ಯಾಗ ಮಾಡಿದ ನನಗೆ ಟಿಕೆಟ್ ಕೊಡಿ: ಪಾಟೀಲ

ಹಿರೇಕೆರೂರು (ಹಾವೇರಿ ಜಿಲ್ಲೆ): ‘ಟಿಕೆಟ್‌ಗಾಗಿ ಹೆದರಿಸುವುದು, ಬೆದರಿಸುವುದು ನಂಗೊತ್ತಿಲ್ಲ. ಸುಮ್ಮನಿದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯವಾಗಿ ಭಾವಿಸಬಾರದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನನಗೆ ಟಿಕೆಟ್ ನೀಡಬೇಕು’ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಆಗ್ರಹಿಸಿದರು.

‘ನಾವು 17 ಶಾಸಕರು ಅಧಿಕಾರ, ಸ್ಥಾನ ತ್ಯಾಗ ಮಾಡಿದವರು. ನಮ್ಮಿಂದ ರಾಜ್ಯದಲ್ಲಿ ನಾಲ್ಕು ವರ್ಷ ಬಿಜೆಪಿ ಸರ್ಕಾರ ರಚನೆಯಾಗಿ, ಆಡಳಿತ ನಡೆಸಿತು. ನಮಗೆ ಟಿಕೆಟ್ ಕೊಡುವುದರಲ್ಲಿ ನ್ಯಾಯ ಇದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಬಸವರಾಜ ಬೊಮ್ಮಾಯಿ ಈಗಾಗಲೇ ಒಮ್ಮೆ ಮುಖ್ಯಮಂತ್ರಿ ಆಗಿದ್ದಾರೆ. ನಾನು ಹಾವೇರಿ–ಗದಗ ಜಿಲ್ಲೆಗಳ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಹಾವೇರಿ ಲೋಕಸಭೆ ಟಿಕೆಟ್ ನನಗೆ ಕೊಡುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇನೆ. ಆದರೆ, ಕೇಂದ್ರದ ನಾಯಕರನ್ನು ಭೇಟಿಯಾಗಿಲ್ಲ’ ಎಂದು ಅವರು ತಿಳಿಸಿದರು.

‘ಕಾಂತೇಶ್​​ ಇಲ್ಲವೇ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಟ್ಟರೆ ಕಾರ್ಯಕರ್ತರೊಂದಿಗೆ ಮಾತನಾಡಿ ಮುಂದಿನ ನಿರ್ಣಯ ಕೈಗೊಳ್ಳುವೆ. ಅಭ್ಯರ್ಥಿಯು ಹಾವೇರಿ-ಗದಗನವರೇ ಆಗಬೇಕಲ್ಲವೇ? ಎಲ್ಲ ಈಗಲೇ ಹೇಳಿದರೆ ರುಚಿ ಉಳಿಯುವುದಿಲ್ಲ. ನಾನು ಎಚ್ಚರಿಕೆ ಕೊಡುತ್ತಿಲ್ಲ. ಟಿಕೆಟ್​ ಕೊಡಿ ಎಂದು ಬೇಡಿಕೆ ಇಟ್ಟಿದ್ದೇನೆ’ ಎಂದರು.

‘ಟಿಕೆಟ್ ಸಿಗದಿದ್ದರೆ, ನನ್ನ ಮುಂದಿನ ನಡೆಯ ಬಗ್ಗೆ ಕಾರ್ಯಕರ್ತರ ಜೊತೆ ಚರ್ಚಿಸುವೆ. ನನಗೆ ನನ್ನದೇ ಹಾದಿ ಇದೆ. ನಾನು ನಡೆದಿದ್ದೇ ದಾರಿ. ನನಗೆ ಹೆಬ್ಬಾರ್​, ಶೇಖರ್ ಹಾದಿ ಬೇಕಾಗಿಲ್ಲ. ಕೃಷಿ ಸಚಿವನಾಗಿ ರೈತರ ಹಿತ ಕಾಯ್ದಿದ್ದೇನೆ. ಕಾಂತೇಶ್ ಅವರ ಬಗ್ಗೆ ಮಾತನಾಡಲ್ಲ. ಕಾಂತೇಶ್​​ಗೂ ಮತ್ತು ನನಗೂ ಸಂಬಂಧ ಇಲ್ಲ’ ಎಂದರು.

‘ನನ್ನ ವಿರುದ್ಧದ ಪಿತೂರಿಯಿಂದ ಸತ್ಯ ಬಯಲು’

ಬೆಳಗಾವಿ: ‘ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ನನ್ನ ವಿರುದ್ಧ ಪಿತೂರಿ ನಡೆದಿದೆ. ಇದರಿಂದ ತೊಂದರೆ ಬದಲು ಒಳ್ಳೆಯದೇ ಆಗಿದೆ. ನಾನು ಏನೆಲ್ಲ ಕೆಲಸ ಮಾಡಿದ್ದೇನೆ ಎಂಬುದು ನಾಯಕರಿಗೆ, ಜನರಿಗೆ ಗೊತ್ತಾಗಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

‘ಯಾವಾಗ ವಿರೋಧ ವ್ಯಕ್ತವಾಗುವುದೋ, ಆಗಲೇ ನಮ್ಮ ನಾಯಕರು ಮಾಹಿತಿ ಸಂಗ್ರಹಿಸುವರು. ನಮ್ಮ ಕೆಲಸ ಗುರುತಿಸುವರು. ಶೋಭಾಗೆ ಏಕೆ ವಿರೋಧವಿದೆ ಎಂಬ ಸತ್ಯ‌ ಗೊತ್ತಾಗುತ್ತದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಬಿಜೆಪಿಯ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ತಪ್ಪುತ್ತದೆ ಎಂದು ನಮ್ಮ‌ ನಾಯಕರು ಎಲ್ಲಿಯೂ ಹೇಳಿಲ್ಲ. ಇದು ಮಾಧ್ಯಮಗಳಲ್ಲಿ ಮಾತ್ರ ಹರಿದಾಡುತ್ತಿದೆ. ಯಾರು ಒಳ್ಳೆಯ ‌ಕೆಲಸ ಮಾಡಿದ್ದಾರೋ, ಅವರಿಗೆ ಟಿಕೆಟ್ ಸಿಗುತ್ತದೆ. ಇದು ಬಿಜೆಪಿಯ ಸೂತ್ರ. ಈ ಸಲವೂ ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ’ ಎಂದು ಅವರು ಹೇಳಿದರು.

‘ಚುನಾವಣೆ ‌ಬಂದ ಕಾರಣ ಅಡುಗೆ ಅನಿಲ ಹಾಗೂ ಪೆಟ್ರೋಲ್ ದರ ಇಳಿಸಿಲ್ಲ. ಅನಿಲಗಳ ದರ ವ್ಯತ್ಯಾಸ ವಿದೇಶಿ ಮಾರುಕಟ್ಟೆ ಮೇಲೆ‌ ನಿರ್ಧಾರವಾಗುತ್ತದೆ. ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಖಾದ್ಯ ತೈಲದಲ್ಲಿ ನಾವು ಸ್ವಾವಲಂಬಿ ಆಗಿಲ್ಲ. ಹೀಗಾಗಿ ದರ ಏರಿಕೆ– ಇಳಿಕೆ ಸಹಜ’ ಎಂದು ಅವರು ಹೇಳಿದರು.

‘ಸಂಸದರಿಗೆ ಟಿಕೆಟ್ ಇಲ್ಲ ಎಂಬುದು ಊಹಾಪೋಹ’

ಶಿವಮೊಗ್ಗ: ‘ಪಕ್ಷದ ಹಾಲಿ ಸಂಸದರ ಪೈಕಿ ಬಹುತೇಕರಿಗೆ ಟಿಕೆಟ್ ಕೈತಪ್ಪಲಿದೆ. ಹಳಬರಲ್ಲಿ ಶೇ 50ರಷ್ಟು ಮಂದಿಗೆ ಮಾತ್ರ ಟಿಕೆಟ್ ನೀಡಲಾಗುತ್ತದೆ ಎಂಬ ಮಾನದಂಡ ಬಿಜೆಪಿಯಲ್ಲಿ ಇಲ್ಲ. ಅದೆಲ್ಲ ಕೇವಲ ಊಹಾಪೋಹ. ಗೆಲ್ಲುವ ಅಭ್ಯರ್ಥಿಗೆ, ಪಕ್ಷ ನಿಷ್ಠರಿಗೆ ಟಿಕೆಟ್ ಸಿಗಲಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

‘ಚುನಾವಣೆಗೆ ಟಿಕೆಟ್ ಹಂಚಿಕೆ ಮಾಡುವುದು ಪಕ್ಷದ ಹಂತದಲ್ಲಿ ನಡೆಯುವ ಒಂದು ಪ್ರಕ್ರಿಯೆ ಅಷ್ಟೇ. ಇದರಲ್ಲಿ ಯಾವುದೇ ಕಸರತ್ತು ಇರಲ್ಲ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.  ‘ಮುಖ್ಯಮಂತ್ರಿ ಸಿದ್ದರಾಮಯ್ಯ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಅಂದವರಿಗೆ ರಕ್ಷಣೆ, ಹಿಂದೂಸ್ತಾನ್ ಜಿಂದಾಬಾದ್ ಅಂದವರಿಗೆ ಶಿಕ್ಷೆ. ಇದು ಅವರ ಧೋರಣೆ. ಇದನ್ನೂ ಜನ ಗಮನಿಸುತ್ತಿದ್ದಾರೆ. ಕರ್ನಾಟಕದಲ್ಲಿ 28 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆಯಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.