ADVERTISEMENT

ಚುನಾವಣೆಗೆ ಬಿಜೆಪಿಯಿಂದ ಸಾವಿರ ಕೋಟಿ ಕಪ್ಪು ಹಣ ಬಳಕೆ: ಕಾಂಗ್ರೆಸ್ ಆರೋಪ

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 18:34 IST
Last Updated 3 ಡಿಸೆಂಬರ್ 2019, 18:34 IST
   

ಬೆಂಗಳೂರು: ‘ಆಪರೇಷನ್ ಕಮಲ ಹಾಗೂ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಮುಖಂಡರು ಒಂದು ಸಾವಿರ ಕೋಟಿ ರೂಪಾಯಿ ಕಪ್ಪು ಹಣ ಬಳಕೆ ಮಾಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಲ್ಲಿ ಮಂಗಳವಾರ ಆರೋಪಿಸಿದರು.

ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್, ಜೆಡಿಎಸ್‌ನ 17 ಅನರ್ಹಗೊಂಡಿರುವ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ. ಇವರಿಗೆ ನೀಡಿರುವ ಹಣ, ಉಪಚುನಾವಣೆ ಖರ್ಚು ಲೆಕ್ಕ ಹಾಕಿದರೆ ಸಾವಿರ ಕೋಟಿ ದಾಟುತ್ತದೆ. ಈಗ ಪ್ರತಿ ಕ್ಷೇತ್ರದಲ್ಲಿ ಗೆಲುವಿ
ಗಾಗಿ ₹50ರಿಂದ 60 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ವರ್ಗಾವಣೆ ದಂಧೆ, ಭ್ರಷ್ಟಾಚಾರ ನಡೆಸಿ ಇಷ್ಟೊಂದು ದೊಡ್ಡ ಮೊತ್ತವನ್ನು ಬಿಜೆಪಿ ನಾಯಕರು ಸಂಗ್ರಹಿಸಿದ್ದಾರೆ. ಚುನಾವಣೆ ಆಯೋಗ, ಆದಾಯತೆರಿಗೆ ಇಲಾಖೆಗೆ ದೂರು ನೀಡಿದರೂ ಕ್ರಮ ಜರುಗಿಸಿಲ್ಲ’ ಎಂದರು.

ADVERTISEMENT

ಸೋಲಿನ ಭಯ: ಸೋಲುವ ಆತಂಕದಿಂದ ಬಿಜೆಪಿ ಮುಖಂಡರು ಜಾತಿ, ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈಗ ಸಚಿವ ಮಾಧುಸ್ವಾಮಿ ವಿರುದ್ಧವೂ ದೂರು ಕೊಡಲಾಗಿದೆ. ಆಯೋಗ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಹೇಳಿದರು.

ಸೇರಿಸಿಕೊಂಡಿಲ್ಲ: ಆಪರೇಷನ್ ಕಮಲಕ್ಕೆ ಬಲಿಯಾಗಿದ್ದ ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜ್ ವಾಪಸ್ ಪಕ್ಷಕ್ಕೆ ಬರುವುದಾಗಿ ಕೇಳಿಕೊಂಡರೂ ಸೇರಿಸಿಕೊಂಡಿಲ್ಲ ಎಂದರು.

‘ಬಿಎಸ್‌ವೈ ಕೆನ್ನೆಗೆ ಹೊಡೆಯಬೇಕೆ?’: ‘ಕಾಂಗ್ರೆಸ್‌ನಲ್ಲಿರುವ ಲಿಂಗಾಯತ– ವೀರಶೈವರು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೆನ್ನೆಗೆ ಹೊಡೆಯಬೇಕೆ’ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

‘ಲಿಂಗಾಯತ– ವೀರಶೈವರು ಬಿಜೆಪಿ ಅಭ್ಯರ್ಥಿ ಹೊರತುಪಡಿಸಿ ಅನ್ಯ ಪಕ್ಷದವರಿಗೆ ಮತ ನೀಡಿದರೆ ಯಡಿಯೂರಪ್ಪ ಕೆನ್ನೆಗೆ ಹೊಡೆದಂತೆ’ ಎಂದುಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.