ADVERTISEMENT

ಯುವಮೋರ್ಚಾ ಕಾರ್ಯಕರ್ತರಿಗೆ ಮೆಚ್ಯೂರಿಟಿ ಇಲ್ಲ: ಕೆ.ಎಸ್.ಈಶ್ವರಪ್ಪ

ಪ್ರವೀಣ್ ನೆಟ್ಟಾರು ಕೊಲೆ ಖಂಡಿಸಿ ರಾಜೀನಾಮೆ ಪರ್ವ: ಕೆ.ಎಸ್.ಈಶ್ವರಪ್ಪ ಬೇಸರ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 12:35 IST
Last Updated 29 ಜುಲೈ 2022, 12:35 IST
ಕೆ.ಎಸ್‌ ಈಶ್ವರಪ್ಪ
ಕೆ.ಎಸ್‌ ಈಶ್ವರಪ್ಪ    

ಶಿವಮೊಗ್ಗ: ಬಿಜೆಪಿ ಯುವಮೋರ್ಚಾ ಕಾರ್ಯಕರ್ತರಿಗೆ ಮೆಚ್ಯೂರಿಟಿ (ಪ್ರಬುದ್ಧತೆ) ಇಲ್ಲ. ಹೀಗಾಗಿಯೇ ಪ್ರವೀಣ್ ನೆಟ್ಟಾರು ಕೊಲೆ ಖಂಡಿಸಿ ರಾಜೀನಾಮೆ ಕೊಡುತ್ತಿದ್ದಾರೆ. ಪಕ್ಷದ ಹಿರಿಯರನ್ನು ಬೈಯ್ಯುತ್ತಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕೊಟ್ಟವರು ಅದನ್ನು ವಾಪಸ್ ಪಡೆಯಬೇಕು. ಅಕಸ್ಮಾತ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ರಾಜೀನಾಮೆ ಒಪ್ಪಿಕೊಂಡರೆ ಹೊಸಬರು ಬರುತ್ತಾರೆ. ಅದು ಐದು ನಿಮಿಷದ ಕೆಲಸ. ಏನು ಬಿಜೆಪಿಗೆ ಕಾರ್ಯಕರ್ತರು ಸಿಗೊಲ್ಲವೇನು ಎಂದು ಪ್ರಶ್ನಿಸಿದರು.

‘ನಾವೆಲ್ಲ ಸ್ಥಾನಮಾನದಲ್ಲಿದ್ದೇವೆ. ಯುವಮೋರ್ಚಾ ಕಾರ್ಯಕರ್ತರು ಈಗ ತಾನೇ ಕಣ್ಣು ಬಿಡುತ್ತಿದ್ದಾರೆ. ರಾಜೀನಾಮೆ ಕೊಡುವುದು ಆಮೇಲೆ. ನೀವು ಪಕ್ಷಕ್ಕೆ ಕೊಟ್ಟಿರುವ ಕೊಡುಗೆ ಏನು ಎಂದು ಪ್ರಶ್ನಿಸಿಕೊಳ್ಳಿ‘ ಎಂದು ಸಲಹೆ ನೀಡಿದರು.

ADVERTISEMENT

ಹೀಗೆ ಕೊಲೆಗಳಿಗೆ ಬೆದರಿಶ್ಯಾಮ್ ಪ್ರಸಾದ್ ಮುಖರ್ಜಿ ಹಾಗೂ ದೀನ್‌ ದಯಾಳ್ ಉಪಾಧ್ಯಾಯ ರಾಜೀನಾಮೆ ಕೊಟ್ಟು ಹೊರಗೆ ಹೋಗಿದ್ದರೆ ಬಿಜೆಪಿ ಇಂದು ಅಧಿಕಾರದಲ್ಲಿ ಇರುತ್ತಿರಲಿಲ್ಲ. ಹಲವು ಹಿರಿಯರ ಕಗ್ಗೊಲೆ, ಪ್ರಾಣ ತ್ಯಾಗದ ನಂತರ ಸಂಘಟನೆ ಬಲಗೊಂಡು ಇಂದು ನರೇಂದ್ರ ಮೋದಿ ಪ್ರಧಾನಿ ಆಗಿದ್ದಾರೆ ಎಂದರು.

ರಾಜೀನಾಮೆ ಕೊಡುವುದರಿಂದ ಹಿಂದುತ್ವದ ಸಿದ್ಧಾಂತಕ್ಕೆ, ಅನೇಕ ವರ್ಷಗಳಿಂದ ಸಂಘಟನೆ ಕಟ್ಟಿಕೊಂಡು ಬಂದ ನಾಯಕರಿಗೆ ಅಪಮಾನ ಮಾಡಿದಂತೆ. ರಾಜೀನಾಮೆ ಕೊಟ್ಟವರು ವಾಪಸ್ ಪಡೆಯಬೇಕು. ನೀ (ಕಾರ್ಯಕರ್ತ) ಎಲ್ಲಿಗೆ ಹೋಗುತ್ತೀಯ. ಕಾಂಗ್ರೆಸ್‌ಗೆ ಹೋಗುತ್ತೀಯ.. ಆಗೊಲ್ಲ.. ಬರೆದಿಟ್ಟುಕೊಳ್ಳಿ.. ಬಿಜೆಪಿ ಸ್ಥಾನಮಾನಕ್ಕೆ ರಾಜೀನಾಮೆ ಕೊಟ್ಟವರು ಪ್ರಾಣ ಹೋದವರು ಪಕ್ಷ ಬಿಟ್ಟು ಬೇರೆಡೆಗೆ ಹೋಗುವುದಿಲ್ಲ ಎಂದು ಹೇಳಿದರು.

ಅವರು (ಕಾರ್ಯಕರ್ತರು) ಬೈದರು ಎಂದು ನಾವು ಬೈಯ್ಯುವುದಾ?ಹಿರಿಯರಾಗಿ ಸಮಾಧಾನ ಮಾಡುತ್ತೇವೆ. ಅವರು ಬದಲಾಗಿ ರಾಜೀನಾಮೆ ವಾಪಸ್ ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದರು.

ಹಿಂದೂಗಳ ಹತ್ಯೆ ಮಾಡುತ್ತಿರುವ ಮುಸಲ್ಮಾನ ಗೂಂಡಾಗಳಿಗೆ ಬುದ್ಧಿ ಹೇಳಿ ಬದಲಾಯಿಸಲು ಪ್ರಯತ್ನಿಸುತ್ತೇವೆ. ಇಲ್ಲವೆಂದರೆ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ನೀಡುವ ನಿರ್ದೇಶನದಂತೆ ಕ್ರಮ ಕೈಗೊಳ್ಳುತ್ತೇವೆ. ಮರ್ಯಾದೆಗೆಟ್ಟ ಮುಸಲ್ಮಾನ ಗೂಂಡಾಗಳಿಗೆ ಉತ್ತರ ಪ್ರದೇಶದಲ್ಲಿ ಮಾಡಿದಂತೆ ಮಾಡಬೇಕಾ ಎಂದು ಪ್ರಶ್ನಿಸಿದರು. ಆಗ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿದ್ದೆವು. ಈಗ ಜಿಹಾದಿ ವಿಚಾರಧಾರೆಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.