ADVERTISEMENT

ಬಿಜೆಪಿಯ ಭ್ರಷ್ಟಾಚಾರ; ರಾಜ್ಯಕ್ಕೆ ಕಳಂಕ - ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2023, 12:33 IST
Last Updated 26 ಏಪ್ರಿಲ್ 2023, 12:33 IST
ನಿಪ್ಪಾಣಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಕಾಸಾಹೇಬ ಪಾಟೀಲ ಪರ ನಡೆದ ಪ್ರಚಾರ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು
ನಿಪ್ಪಾಣಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಕಾಸಾಹೇಬ ಪಾಟೀಲ ಪರ ನಡೆದ ಪ್ರಚಾರ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು   

ನಿಪ್ಪಾಣಿ: ‘ಆಡಿದಂತೆ ಒಂದೂ ಮಾತು ಪೂರ್ಣಗೊಳಿಸದ ಬಿಜೆಪಿ ಸರ್ಕಾರವು ಭ್ರಷ್ಟಾಚಾರದ ಮೂಲಕ ರಾಜ್ಯಕ್ಕೆ ಕಲಂಕ ತಂದಿದೆ’ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಸ್ಥಳೀಯ ವಿಧಾನಸಭೆ ಚುನಾವಣೆಯ ಅಭ್ಯರ್ಥಿ ಕಾಕಾಸಾಹೇಬ ಪಾಟೀಲ ಪರ ನಗರದ ಮುನಿಸಿಪಲ್ ಪ್ರೌಢಶಾಲೆಯಲ್ಲಿ ಮಂಗಳವಾರ ಜರುಗಿದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ಕಳೆದ 4 ವರ್ಷಗಳಲ್ಲಿ ಬಿಜೆಪಿಯಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಹಣದುಬ್ಬರ ಮಾಡಿಸಿ ಸರ್ವಸಾಮಾನ್ಯರ ಹೊಟ್ಟೆಗೆ ಬಡಿಯುವ ಕಾಯ್ ಮಾಡುತ್ತಿದ್ದಾರೆ. ಅದಕ್ಕೆ ಈ ಚುನಾವಣೆಯಲ್ಲಿ ಅವರನ್ನು ಮತ್ತು ಸಚಿವೆ ಶಶಿಕಲಾ ಜೊಲ್ಲೆಯವರನ್ನು ಬದಿಗಿಟ್ಟು ಕಾಕಾಸಾಹೇಬ ಪಾಟೀಲರನ್ನು ಚುನಾಯಿಸಿ’ ಎಂದರು.

‘ಬಿಜೆಪಿ ಸರ್ಕಾರವು ಸರ್ವಸಾಮಾನ್ಯ ನಾಗರಿಕರ ಮತ್ತು ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ನಾವು ಆರಂಭಿಸಿದ ಎಲ್ಲ ಯೋಜನೆಗಳನ್ನು ಬಂದ್ ಮಾಡಿಸಿದೆ. ಆಪರೇಶನ್ ಕಮಲದ ಮೂಲಕ ಸಾವಿರಾರು ಕೋಟಿ ರೂ. ವೆಚ್ಚ ಮಾಡಿ ಹಿಂದಿನ ಬಾಗಿಲಿನಿಂದ ಬಂದು ಸರ್ಕಾರ ಸ್ಥಾಪಿಸಿದೆ’ ಎಂದು ಆರೋಪಿಸಿದರು.

ADVERTISEMENT

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ ‘ರಾಜ್ಯದಲ್ಲಿ ಪರಿವರ್ತನೆ ಕಟ್ಟಿಟ್ಟ ಬುತ್ತಿ. ಮರಾಠಾ ಸಮಾಜದ ಹುಲಿ ಕಾಕಾಸಾಹೇಬ ಪಾಟೀಲರಿಗೆ ಬಹುಮತಗಳಿಂದ ಗೆಲ್ಲಿಸಿ’ ಎಂದರು.

ನೆರೆದ ಜನಸ್ತೋಮ

ಅಭ್ಯರ್ಥಿ ಕಾಕಾಸಾಹೇಬ ಪಾಟೀಲ ಮಾತನಾಡಿ ‘ಶಾಸಕನಾಗಿದ್ದ ಸಂದರ್ಭದಲ್ಲಿ 15 ವರ್ಷಗಳಲ್ಲಿ ಶಾಶ್ವತ ಕಾಮಗಾರಿಗಳನ್ನು ಮಾಡುವ ಮೂಲಕ ತಾಲೂಕಿನ ಅಭಿವೃದ್ಧಿಗಾಗಿ ಪ್ರಯತ್ನಿಸಿದ್ದೇನೆ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಲು ಪ್ರಯತ್ನಿಸಲಾಗುವುದು’ ಎಂದರು.

ಪ್ರಚಾರಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ವೀರಕುಮಾರ ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ರಾಜೇಮದ್ರ ವಡ್ಡರ, ಸುಮಿತ್ರಾ ಉಗಳೆ, ಅಣ್ಣಾಸಾಹೇಬ ಹಾವಲೆ, ವಿನೋಧ ಸಾಳುಂಖೆ, ಸೀತಾರಾಮ ಪಾಟೀಲ, ಅಭಿಜೀತ ಬೋಧಲೆ, ಸುಪ್ರಿಯಾ ಪಾಟೀಲ, ಪ್ರಮೋದ ಪಾಟೀಲ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, ಮೋಹನ ಜೋಶಿ, ಲಕ್ಷ್ಮಣರಾವ ಚಿಂಗಳೆ, ರಾಜೇಶ ಕದಮ, ಬಸವರಾಜ ಪಾಟೀಲ, ಪಂಕಜ ಪಾಟೀಲ, ಸ್ಥಳೀಯ ಹಾಲಶುಗರ್ ಕಾರ್ಖಾನೆಯ ಸಂಚಾಲಕ ಸುಕುಮಾರ ಪಾಟೀಲ-ಬುಧಿಹಾಳಕರ, ರೋಹನ ಸಾಳವೆ, ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.