ADVERTISEMENT

ಮತೀಯವಾದಿ ನಾಯಕರಂತಿದೆ ಪೇಜಾವರ ಶ್ರೀ ನಡೆ: ಹರಿಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 16:13 IST
Last Updated 3 ಡಿಸೆಂಬರ್ 2024, 16:13 IST
ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್   

ಬೆಂಗಳೂರು: ‘ಸಂವಿಧಾನ ಬದಲಾವಣೆಯ ಮುಂಚೂಣಿಯ ನಾಯಕರಂತೆ ವರ್ತಿಸುತ್ತಿದ್ದ ಪೇಜಾವರ ಮಠದ ಸ್ವಾಮೀಜಿ, ತಮ್ಮ ಹೇಳಿಕೆಗಳು ಹಾಗೂ ನಡವಳಿಕೆಗಳಿಂದ ಪ್ರಜ್ಞಾವಂತ ಸಮಾಜ ತಿರುಗಿ ಬಿದ್ದಿರುವುದನ್ನು ನೋಡಿ ‘ನಾನು ಸಂವಿಧಾನ ವಿರೋಧಿ ಹೇಳಿಕೆಯನ್ನೇ ನೀಡಿಲ್ಲ’ ಎಂದು ತಾವೇ ಆಡಿದ ಮಾತುಗಳನ್ನು ತಿರುಚಿಕೊಳ್ಳುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಟೀಕಿಸಿದ್ದಾರೆ.

‘ಸಮಾಜ ದಾರಿ ತಪ್ಪಿದರೆ ತಿದ್ದುವ ಹಾಗೂ ಧರ್ಮದೊಳಗಿನ ಸಹಬಾಳ್ವೆಯ ತಿರುಳನ್ನು ತಿಳಿ ಹೇಳುವ ಸ್ವಾಮೀಜಿಗಳೇ ಸಮಾಜವನ್ನು ದಾರಿತಪ್ಪಿಸುತ್ತಿರುವುದು ಸ್ವಾಸ್ಥ್ಯ ಸಮಾಜ ಒಡೆಯುವ ಹುನ್ನಾರ. ಪೇಜಾವರರ ನಡೆ ಮತೀಯವಾದಿ ಸಂಘಟನೆ ನಾಯಕರಂತೆ ಕಾಣುತ್ತಿದೆ’ ಎಂದಿದ್ದಾರೆ.

‘ಸಂವಿಧಾನದಡಿ ಚುನಾಯಿತ ಸರ್ಕಾರದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿಯ ಮಾಧ್ಯಮ ವಕ್ತಾರರಂತೆ ಸ್ವಾಮೀಜಿ ಮಾತನಾಡುತ್ತಿದ್ದಾರೆ. ‘ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದ್ದಾರೆ’ ಎಂಬ ಅವರ ಬಹಿರಂಗ ಹೇಳಿಕೆ ಬಿಜೆಪಿ ಪಕ್ಷದ ನಿಷ್ಠೆಯನ್ನು ಸಾಬೀತು ಮಾಡುತ್ತಿರುವಂತಿದೆ. ಆಧಾರ ಇಲ್ಲದೇ ಒಂದು ಸರ್ಕಾರದ ಮೇಲೆ ಗಂಭೀರ ಆರೋಪಗಳನ್ನು ಮಾಡುವುದು ಯತಿಗಳಾದಂತವರಿಗೆ ತರವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ತಮ್ಮ ಸಂವಿಧಾನದ ವಿರೋಧಿ ನಿಲುವುಗಳಿಂದ ದಲಿತರು, ಶೋಷಿತ ಸಮುದಾಯಗಳ ಆಕ್ರೋಶ ಎದುರಿಸಲಾಗದೆ  ಅಲ್ಪಸಂಖ್ಯಾತರ ವಿರುದ್ಧ ಮಾತಾಡುವ ಮೂಲಕ ಚರ್ಚೆಯನ್ನೇ ದಾರಿ ತಪ್ಪಿಸುತ್ತಿದ್ದಾರೆ. ಸಂವಿಧಾನ ಬದಲಾವಣೆಯ ಹೇಳಿಕೆ ನೀಡಿದ ಬಿಜೆಪಿ ನಾಯಕರಿಗೆ ಸಾರ್ವಜನಿಕ ಜೀವನದಲ್ಲಿ ಯೋಗ್ಯತೆಯೇ ಇಲ್ಲ ಎಂದು ಕಳೆದ ವರ್ಷವೇ ಜನರು ತಕ್ಕ ಉತ್ತರ ನೀಡಿದ್ದಾರೆ. ಅಂತಹ ದುರ್ದೈವವನ್ನು ಪೇಜಾವರ ಸ್ವಾಮೀಜಿ ಬರ ಮಾಡಿಕೊಳ್ಳದೇ ಇರಲಿ’ ಎಂದು ಆಶಿಸಿದ್ದಾರೆ.

‘ತಮಗೆ ಗೌರವ ನೀಡುವ ಸಂವಿಧಾನ ಬರಲಿ ಎಂದು ರಾಜ್ಯದ ಸಂವಿಧಾನದ ರಕ್ಷಕರಾಗಿರುವ ರಾಜ್ಯಪಾಲರಿಗೆ ಮನವಿ ನೀಡುವುದು ಅತ್ಯಂತ ಖಂಡನೀಯ. ಕೂಡಲೇ, ರಾಜ್ಯಪಾಲರು ಸಂವಿಧಾನ ವಿರೋಧಿ ಮನಸ್ಥಿತಿಯ ಸ್ವಾಮೀಜಿ ವಿರುದ್ಧ ಕ್ರಮಕ್ಕೆ ಮುಂದಾಗಬೇಕು’ ಎಂದು ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.