ADVERTISEMENT

ದೇವೇಗೌಡರ ಆಪ್ತ ಬಿ.ಎಲ್‌.ದೇವರಾಜು ಕಾಂಗ್ರೆಸ್‌ಗೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 13:24 IST
Last Updated 24 ಮಾರ್ಚ್ 2023, 13:24 IST
ಬಿ.ಎಲ್‌.ದೇವರಾಜು
ಬಿ.ಎಲ್‌.ದೇವರಾಜು   

ಕೆ.ಆರ್‌.ಪೇಟೆ (ಮಂಡ್ಯ): ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಕುಟುಂಬದ ಆಪ್ತ, 40 ವರ್ಷಗಳಿಂದ ಜನತಾದಳದಲ್ಲಿದ್ದ ತಾಲ್ಲೂಕಿನ ಹಿರಿಯ ಮುಖಂಡ ಬಿ.ಎಲ್‌.ದೇವರಾಜು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುತ್ತಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್ ದೊರೆಯದಿದ್ದಕ್ಕೆ ಅಸಮಾಧಾನಗೊಂಡಿದ್ದ ಅವರು ಶುಕ್ರವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜೆಡಿಎಸ್ ಸಖ್ಯ ತೊರೆಯುತ್ತಿರುವುದಾಗಿ ಪ್ರಕಟಿಸಿದರು.

‘1983ರಿಂದ ಜನತಾಪಕ್ಷ, ಜನತಾದಳ, ಸಮಾಜವಾದಿ ಜನತಾ ಪಕ್ಷ , ಜೆಡಿಎಸ್‌ನಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. 2019ರ ಉಪ ಚುನಾವಣೆಯಲ್ಲಿ ಕೇವಲ 5 ಸಾವಿರ ಮತಗಳ ಅಂತರದಿಂದ ಸೋತೆ. ಎಚ್‌.ಡಿ.ಕುಮಾರಸ್ವಾಮಿ 1 ದಿನ ಪ್ರಚಾರಕ್ಕೆ ಬಂದಿದ್ದರೂ ನಾನು ಸೋಲುತ್ತಿರಲಿಲ್ಲ’ ಎಂದರು.

ADVERTISEMENT

‘2018ರ ಚುನಾವಣೆಯಲ್ಲಿ ನಾರಾಯಣಗೌಡ ಹಾಗೂ ನನಗೆ ಇಬ್ಬರಿಗೂ ಬಿ.ಫಾರಂ ನೀಡಿದ್ದರು, ನಂತರ ಅದನ್ನು ರದ್ದು ಮಾಡಿ ಇಬ್ಬರಿಗೂ ಸಿ.ಫಾರಂ ಕೊಟ್ಟರು. ನಂತರ ನನ್ನ ನಾಮಪತ್ರ ತಿರಸ್ಕೃತಗೊಂಡಿತು. 2004, 2013ರ ಚುನಾವಣೆಗಳಲ್ಲೂ ನಾನು ಟಿಕೆಟ್‌ ವಂಚಿತನಾಗಿದ್ದೆ. ಇದು ನನಗೆ ಕೊನೆಯ ಚುನಾವಣೆಯಾಗಿದ್ದು ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದೆ. ಆದರೆ ಈಚೆಗೆ ಪಕ್ಷಕ್ಕೆ ಬಂದಿರುವ ಎಚ್‌.ಟಿ.ಮಂಜು ಅವರಿಗೆ ಟಿಕೆಟ್‌ ಘೋಷಣೆ ಮಾಡಿದ್ದಾರೆ’ ಎಂದರು.

‘ಇದನ್ನು ಪುನರ್ ಪರಿಶೀಲಿಸುವಂತೆ ಕೋರಿದರೂ ಜೆಡಿಎಸ್‌ ವರಿಷ್ಠರು ಸೌಜನ್ಯಕ್ಕಾದರೂ ಕರೆದು ಮಾತನಾಡಿಸಲಿಲ್ಲ. ನನ್ನ ಬೆಂಬಲಿಗರು, ಹಿತೈಷಿಗಳ ತೀರ್ಮಾನದಂತೆ ಕಾಂಗ್ರೆಸ್‌ ಪಕ್ಷ ಸೇರಲು ನಿರ್ಧರಿಸಿದ್ದೇನೆ. ಮಾರ್ಚ್‌ 27ರಂದು ಸಾವಿರಾರು ಬೆಂಬಲಿಗರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.