ADVERTISEMENT

ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್‌: ತಲಘಟ್ಟಪುರದಲ್ಲಿ ಭೂ ಸ್ವಾಧೀನ ರದ್ದು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 16:08 IST
Last Updated 26 ಡಿಸೆಂಬರ್ 2025, 16:08 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್‌ ಯೋಜನೆ’ಗಾಗಿ (ಬಿಎಂಐಸಿಪಿ) 17 ವರ್ಷಗಳ ಹಿಂದೆ ತಲಘಟ್ಟಪುರದಲ್ಲಿನ ಒಂದು ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದ ಸರ್ಕಾರದ ಕ್ರಮವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಜಮೀನು ಸ್ವಾಧೀನ ಪ್ರಶ್ನಿಸಿ ಜಮೀನಿನ ಮಾಲೀಕರಾದ ರತ್ನಾ ರೆಡ್ಡಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್‌.ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಭೂ ಮಾಲೀಕರಿಗೆ ಪರಿಹಾರ ಪಾವತಿ ಮಾಡದೆ, ಸ್ವಾಧೀನ ವಿಳಂಬ ಮಾಡಿರುವ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ) ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

‘ಯೋಜನೆಯ ಜಾರಿಯಲ್ಲಿ ತೀವ್ರ ವಿಳಂಬವಾಗಿದೆ ಮತ್ತು ಪರಿಹಾರ ನೀಡದೇ ಇರುವ ಲೋಪ ಎದ್ದು ಕಾಣುತ್ತಿದೆ. ಮೇಲ್ನೋಟಕ್ಕೆ ಯೋಜನೆಯಲ್ಲಿ ಸಾರ್ವಜನಿಕ ಉದ್ದೇಶ ಇರುವಂತೆ ಕಂಡುಬರುತ್ತಿಲ್ಲ. 17 ವರ್ಷಗಳಿಗೂ ಹೆಚ್ಚು ಕಾಲದಿಂದ ಯಾವುದೇ ಸ್ವಾಧೀನ ಪರಿಹಾರ ನೀಡಿಲ್ಲ ಮತ್ತು ವಿಳಂಬ ಆಗಿರುವುದಕ್ಕೆ ಅಧಿಕಾರಿಗಳು ತೃಪ್ತಿದಾಯಕ ವಿವರಣೆ  ನೀಡುವಲ್ಲಿ ವಿಫಲವಾಗಿದ್ದಾರೆ. ಹಾಗಾಗಿ, ಇಂತಹ ದೀರ್ಘಕಾಲದ ವಿಳಂಬವು ಸ್ವಾಧೀನದ ಸಿಂಧುತ್ವವನ್ನು ದುರ್ಬಲಗೊಳಿಸುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಚ್‌.ಎನ್‌.ಶಶಿಧರ ವಾದ ಮಂಡಿಸಿದ್ದರು ಮತ್ತು ಹೈಕೋರ್ಟ್‌ ವಕೀಲ ಎಚ್‌.ಎಸ್.ಸುಹಾಸ್ ವಕಾಲತ್ತು ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.