ADVERTISEMENT

ಮೂರು ಎಪಿಎಂಸಿಗಳಿಗೆ ಬಯೊ ಸಿಎನ್‌ಜಿ ಘಟಕ: ಸಚಿವ ಸಂಪುಟ ಸಭೆ ಪ್ರಮುಖ ತೀರ್ಮಾನಗಳು

ತ್ಯಾಜ್ಯ ಬಳಸಿ ಜೈವಿಕ ಅನಿಲ ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 15:02 IST
Last Updated 18 ಸೆಪ್ಟೆಂಬರ್ 2025, 15:02 IST
<div class="paragraphs"><p>ಎಪಿಎಂಸಿ ಉಪ ಮಾರುಕಟ್ಟೆ.</p></div>

ಎಪಿಎಂಸಿ ಉಪ ಮಾರುಕಟ್ಟೆ.

   

ಬೆಂಗಳೂರು: ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಬಳಸಿ ಜೈವಿಕ ಅನಿಲ ತಯಾರಿಸಲು ಬೆಂಗಳೂರಿನ ದಾಸನಪುರ, ಕೋಲಾರ ಮತ್ತು ಮೈಸೂರು ಎಪಿಎಂಸಿಗಳಲ್ಲಿ ತಲಾ 50 ಟಿಪಿಡಿ ಬಯೊ ಸಿಎನ್‌ಜಿ ಉತ್ಪಾದನಾ ಘಟಕ ಸ್ಥಾಪಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ADVERTISEMENT

ಇದರಿಂದ ಮಾರುಕಟ್ಟೆ ಪ್ರಾಂಗಣದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಹಾಯಕವಾಗುತ್ತದೆ. ಅಲ್ಲದೇ, ನಿಸರ್ಗದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಜತೆಗೆ ಆದಾಯವೂ ಬರುತ್ತದೆ. ಈ ಯೋಜನೆಯ ಅಂದಾಜು ವೆಚ್ಚ ₹74.88 ಕೋಟಿ. ಪ್ರತಿ ಘಟಕ ಸ್ಥಾಪನೆಗೆ ₹24.96 ಕೋಟಿ ವೆಚ್ಚವಾಗುತ್ತದೆ ಎಂದು ಅವರು ಹೇಳಿದರು.

ಈ ಮೂರು ಎಪಿಎಂಸಿಗಳಲ್ಲಿ ಪ್ರತಿ ದಿನ 20 ರಿಂದ 30 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ತ್ಯಾಜ್ಯವನ್ನು ಬಳಕೆ ಮಾಡಿಕೊಂಡು ಬಯೊ ಸಿಎನ್‌ಜಿ ಘಟಕ ಸ್ಥಾಪನೆ ಮಾಡುವುದರಿಂದ ಎಪಿಎಂಸಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸುದ್ದಿಗಾರರಿಗೆ ತಿಳಿಸಿದರು.

ಪ್ರಮುಖ ತೀರ್ಮಾನಗಳು:

*ವಿಜಯಪುರ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ವಿಜಯಪುರ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳ ಒಟ್ಟು ₹618.75 ಕೋಟಿ ಮೊತ್ತ ಪರಿಷ್ಕೃತ ಅಂದಾಜಿಗೆ ಅನುಮೋದನೆ

*ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಹೃದ್ರೋಗ ವಿಭಾಗ ಸ್ಥಾಪಿಸಲು ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ₹10.89 ಕೋಟಿ ಮೊತ್ತದಲ್ಲಿ ಖರೀದಿಗೆ ಒಪ್ಪಿಗೆ.

*ಗದಗದಲ್ಲಿರುವ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಗಳಿಗೆ ಅಗತ್ಯವಿರುವ ಕಟ್ಟಡ ಮತ್ತು ಮೂಲಸೌಲಭ್ಯ ಒದಗಿಸಲು ₹48.43 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ

*ಗದಗ ಜಿಲ್ಲೆ ರೋಣ ತಾಲ್ಲೂಕಿನ 9 ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯತ್ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹43.50 ಕೋಟಿ. ಮಲಪ್ರಭ ಬಲದಂಡೆ ಕಾಲುವೆಯ ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ₹31.08 ಕೋಟಿ

*ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅನುಷ್ಠಾನಗೊಂಡಿರುವ ಫಿಟ್ಟರ್ ಮತ್ತು ಎಲೆಕ್ಟ್ರಿಷಿಯನ್‌ ವೃತ್ತಿಗಳಿಗೆ ಡಿಜಿಟಿ ಪಠ್ಯಕ್ರಮದಂತೆ ಅಗತ್ಯವಿರುವ ಉಪಕರಣ ಮತ್ತು ಯಂತ್ರೋಪಕರಣಗಳನ್ನು ₹50 ಕೋಟಿಯಲ್ಲಿ ಖರೀದಿಸಲು ಒಪ್ಪಿಗೆ

* ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವೈಟ್‌ ಟಾಪಿಂ‌ಗ್‌ಗೆ ₹58.44 ಕೋಟಿ

* ಕೋಲಾರ ಜಿಲ್ಲೆ ಬಂಗಾರಪೇಟೆ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ

* ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕು ಕರ್ನಾಳ್‌ ಏತನೀರಾವರಿ ಯೋಜನೆಗೆ ₹50.75 ಕೋಟಿ

* ರಾಜ್ಯದ 9,337 ಶಾಲೆಗಳಲ್ಲಿ ಬಿಸಿಯೂಟ ಸಿದ್ಧಪಡಿಸಲು ಹೊಸ ಪಾತ್ರೆ ಪರಿಕರಗಳನ್ನು ಖರೀದಿಸಲು ₹21.55 ಕೋಟಿಯನ್ನು ಕ್ಷೀರಭಾಗ್ಯ ಯೋಜನೆಯ ಅನುದಾನದಿಂದ ಭರಿಸಲು ಒಪ್ಪಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.