ADVERTISEMENT

ಪುಸ್ತಕ ಸಗಟು ಖರೀದಿಗೆ ಹೆಚ್ಚು ಅನುದಾನ: ಶಿವರಾಜ ತಂಗಡಗಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 14:10 IST
Last Updated 12 ಜನವರಿ 2026, 14:10 IST
<div class="paragraphs"><p>‘ಮನೆಗೊಂದು ಗ್ರಂಥಾಲಯ’ ಯೋಜನೆಯಡಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ಶಿವರಾಜ ತಂಗಡಗಿ ಚಾಲನೆ ನೀಡಿದರು.&nbsp;ಮಾನಸ,&nbsp;ಬಿ.ಟಿ. ಲಲಿತಾ ನಾಯಕ್, ಕೆ.ಬಿ. ಕಿರಣ್ ಸಿಂಗ್&nbsp; ಪಾಲ್ಗೊಂಡಿದ್ದರು.</p></div>

‘ಮನೆಗೊಂದು ಗ್ರಂಥಾಲಯ’ ಯೋಜನೆಯಡಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ಶಿವರಾಜ ತಂಗಡಗಿ ಚಾಲನೆ ನೀಡಿದರು. ಮಾನಸ, ಬಿ.ಟಿ. ಲಲಿತಾ ನಾಯಕ್, ಕೆ.ಬಿ. ಕಿರಣ್ ಸಿಂಗ್  ಪಾಲ್ಗೊಂಡಿದ್ದರು.

   

ಬೆಂಗಳೂರು: ‘ನಾಡಿನ ಪ್ರಕಾಶಕರ ಹಿತ ಕಾಯಲು ಕನ್ನಡ ಪುಸ್ತಕ ಪ್ರಾಧಿಕಾರದ ಸಗಟು ಖರೀದಿ ಯೋಜನೆಗೆ ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ನೀಡಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಮ್ಮ ಗೃಹ ಕಚೇರಿಯಲ್ಲಿ ಪುಸ್ತಕ ಪ್ರಾಧಿಕಾರದ ‘ಮನೆಗೊಂದು ಗ್ರಂಥಾಲಯ’ ಯೋಜನೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

‘ಪುಸ್ತಕ ಪ್ರೀತಿ ಎಂಬುದನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಪುಸ್ತಕ ಪ್ರೀತಿಯ ಫಲವಾಗಿಯೇ ಸಾಹಿತಿಗಳು, ಪ್ರಕಾಶಕರು ಹಾಗೂ ಪುಸ್ತಕೋದ್ಯಮ ಜೀವಂತವಾಗಿರಲು ಸಾಧ್ಯ. ಅದಕ್ಕೆ ಈ ಯೋಜನೆ ಪೂರಕವಾಗಲಿದೆ’ ಎಂದು ಆಶಿಸಿದರು.

ಗ್ರಂಥಾಲಯ ಅನುಷ್ಠಾನದ ಪ್ರಶಂಸಾ ಪತ್ರವನ್ನು ಸಾಹಿತಿಯೂ ಆಗಿರುವ ಮಾಜಿ ಸಚಿವೆ ‌ಬಿ.ಟಿ. ಲಲಿತಾ ನಾಯಕ್ ಅವರು ಸಚಿವರಿಗೆ ನೀಡಿದರು.

‘ನಮ್ಮದು ಧರ್ಮಾಧಾರಿತ ಸಮಾಜ. ಅದನ್ನು ಮಾನವ ಧರ್ಮವಾಗಿ ರೂಪಿಸುವ ಹೊಣೆಗಾರಿಕೆ ಪುಸ್ತಕಗಳ ಮೇಲಿದೆ. ಮನೆಗೊಂದು ಗ್ರಂಥಾಲಯ ಯೋಚನೆಯ ಮೂಲಕ ಪ್ರಾಧಿಕಾರವು ಪುಸ್ತಕ ಪ್ರಕಾಶಕರು, ಸಾಹಿತಿಗಳಿಗೆ ನೆರವಾಗಲು ಹೊರಟಿದೆ. ಇದೊಂದು ಉತ್ತಮ ಯೋಜನೆ’ ’ ಎಂದು ಲಲಿತಾ ನಾಯಕ್ ಹೇಳಿದರು. 

ಗ್ರಂಥಾಲಯ ಇಲಾಖೆ ಸಗಟು ಖರೀದಿ ಸ್ಥಗಿತಗೊಳಿಸಿರುವುದರಿಂದ ಪ್ರಕಾಶಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದನ್ನು ಸರಿಪಡಿಸುವಂತೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮನವಿ ಸಲ್ಲಿಸಿದರು.

‘ಮನೆಗೊಂದು ಗ್ರಂಥಾಲಯ ಯೋಜನೆಯ ಮೂಲಕ ಒಂದು ಲಕ್ಷ ಮನೆಗಳನ್ನು ತಲುಪುವ ಗುರಿ ನಮ್ಮದು. ಪ್ರತಿ ಜಿಲ್ಲೆಯಲ್ಲಿ ಜಾಗೃತಿ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಸದಸ್ಯರು ಗ್ರಂಥಾಲಯ ರೂಪಿಸಲು ನೆರವಾಗಲಿದ್ದಾರೆ’ ಎಂದರು.

‘ಬಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿ ಯುರೋಪ್ ದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಕನ್ನಡದಲ್ಲಿಯೂ ಅಂತಹ ಪುಸ್ತಕ ಸಂಸ್ಕೃತಿ ಬರಬೇಕಿದೆ’ ಎಂದರು.

ಬೆಂಗಳೂರು ನಗರ ಜಿಲ್ಲೆಯ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರಿಗೆ ಸಚಿವರು ಅರ್ಹತಾ ಪತ್ರಗಳನ್ನು ವಿತರಿಸಿದರು. ಈ ಯೋಜನೆಯ ಕುರಿತು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಮಾತನಾಡಿದರು. ಪ್ರಾಧಿಕಾರದ ಸದಸ್ಯರಾದ ಲಕ್ಷ್ಮಣ ಕೊಡಸೆ ಮತ್ತು ಬಿ.ಸಿ. ಕುಶಾಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.