
ಔಷಧಿ
ಚಿತ್ರ: ಗೆಟ್ಟಿ
ಗದಗ: ಜಿಲ್ಲೆಯ ಆಯುಷ್ ಇಲಾಖೆಯ ಔಷಧ ಖರೀದಿ ಟೆಂಡರ್‌ನಲ್ಲಿ ಭ್ರಷ್ಟಾಚಾರ ನಡೆದಿರುವ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲ್ ಸಿಂಗ್ ಮತ್ತು ಟೆಂಡರ್ ಹಾಕಿದ ಸಂಸ್ಥೆಯ ಪ್ರತಿನಿಧಿ ಚೌಕಾಸಿ ನಡೆಸಿದ್ದಾರೆ ಎನ್ನಲಾದ 23 ನಿಮಿಷದ ಕಮಿಷನ್ ವ್ಯವಹಾರದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಆಡಿಯೊದಲ್ಲಿ ವ್ಯಕ್ತಿಯೊಬ್ಬರು ಟೆಂಡರ್ ಕೊಡಿಸಲು ಶೇ 30 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ ಇಟ್ಟ ವಿವರಗಳಿವೆ.
₹90 ಲಕ್ಷ ಮೊತ್ತದ ಔಷಧಿ ಖರೀದಿ ಟೆಂಡರ್‌ನಲ್ಲಿ ಆರು ಕಂಪನಿಗಳು ಭಾಗಿಯಾಗಿದ್ದವು. ಆರು ಕಂಪನಿಗಳ ಪೈಕಿ ಎರಡು ಕಂಪನಿಗಳ ಬಗ್ಗೆ ಆಡಿಯೊದಲ್ಲಿ ಪ್ರಸ್ತಾಪ ಇದೆ. ಈ ಪೈಕಿ ದೆಹಲಿ ಮೂಲದ ಕಂಪನಿಯ ಪ್ರತಿನಿಧಿಯೊಂದಿಗೆ ಕಮಿಷನ್ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ಕಚೇರಿಯ ಮಧ್ಯವರ್ತಿ ಕಲ್ಮೇಶಸ್ವಾಮಿ ಹೆಸರು ಪ್ರಸ್ತಾಪಿಸಿ ವ್ಯವಹಾರದ ಬಗ್ಗೆ ಮಾತುಕತೆ ನಡೆಸಿದ್ದು, ಔಷಧಿ ಖರೀದಿಯ ಟೆಂಡರ್ ಅನುಮತಿಗೆ 30 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ ಇಡಲಾಗಿದೆ. ಔಷಧಿ ಲ್ಯಾಬ್ ಟೆಸ್ಟ್‌ನ ಅವ್ಯವಹಾರದ ಬಗ್ಗೆ ಹಾಗೂ ಬೇರೆ ಸ್ಯಾಂಪಲ್ ಟೆಸ್ಟ್‌ಗೆ ಕಳುಹಿಸಲು ಹೆಚ್ಚಿನ ಹಣದ ಬೇಡಿಕೆ, ಲ್ಯಾಬ್ ಸಿಬ್ಬಂದಿಗೂ ಹಣ ಕೊಡುವ ಬಗ್ಗೆಯೂ ಆಡಿಯೊದಲ್ಲಿ ಪ್ರಸ್ತಾಪ ಇದೆ.
ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಕಮಿಷನ್ ಕರ್ಮಕಾಂಡದ ಬಗ್ಗೆ ವ್ಯಾಪಾರಿ ಅಳಲು ತೋಡಿಕೊಂಡಿರುವ ವಿವರಗಳೂ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.