ADVERTISEMENT

ನಾಲ್ಕೈದು ದಿನಗಳಲ್ಲಿ ಕೇಂದ್ರದಿಂದ ನೆರೆ ಪರಿಹಾರ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 6:51 IST
Last Updated 12 ಸೆಪ್ಟೆಂಬರ್ 2019, 6:51 IST
   

ಚಿಕ್ಕಮಗಳೂರು: ಅತಿವೃಷ್ಟಿ ಹಾನಿ ಪರಿಹಾರಕ್ಕೆ ಕೇಂದ್ರ ಸರ್ಕಾರವು ನಾಲ್ಕೈದು ದಿನಗಳಲ್ಲಿ ಅನುದಾನ ಘೋಷಿಸುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ಶೃಂಗೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಏಳೆಂಟು ರಾಜ್ಯಗಳಲ್ಲಿ ಅತಿವೃಷ್ಟಿಯಾಗಿದೆ.ಕೇಂದ್ರದ ತಂಡವು ರಾಜ್ಯದಲ್ಲಿ ಹಾನಿ ಅಧ್ಯಯನ ಮಾಡಿ ವರದಿ ನೀಡಿದೆ’ ಎಂದು ಉತ್ತರಿಸಿದರು.

‘ಅತಿವೃಷ್ಟಿಯಲ್ಲಿ ಮನೆ ಪೂರ್ಣ ನಾಶವಾಗಿರುವ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ತಲಾ ₹ 5 ಲಕ್ಷ ಒದಗಿಸಲಾಗುವುದು. ಈ ಬಗ್ಗೆ ಆದೇಶ ಹೊರಬೀಳಲಿದೆ. ಕಾಫಿ ಸಹಿತ ವಿವಿಧ ಬೆಳೆಗಳು ಈ ಭಾಗದಲ್ಲಿ ನಾಶವಾಗಿವೆ. ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದೆ. ವರದಿ ಪಡೆದು ಪರಿಹಾರ ನೀಡುವನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಕಾಂಗ್ರೆಸ್‌ ಪ್ರತಿಪಕ್ಷವಾಗಿ ಅಸ್ತಿತ್ವ ಉಳಿಸಿಕೊಳ್ಳಲು ಏನಾದರೊಂದು ಚಟುವಟಿಕೆ ಮಾಡಬೇಕು. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದಾಗಿದೆ. ಸಂತ್ರಸ್ತರಿಗೆ ತಲಾ ₹ 10,000 ನೀಡಲಾಗಿದೆ. ಪರಿಹಾರ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕಾಂಗ್ರೆಸ್‌ ಪ್ರತಿಭಟನೆಗೆ ನಾನೇಕೆಬೇಡ ಎನ್ನಲಿ’ ಎಂದು ಉತ್ತರಿಸಿದರು.

‘ಈ ಹಿಂದೆ ಮಳೆಗಾಗಿ ಪೂಜೆ ಸಲ್ಲಿಸಿದ್ದೆವು. ಅತಿವೃಷ್ಟಿಯಿಂದ ಈ ಭಾಗದಲ್ಲಿ ಅಪಾರ ಹಾನಿಯಾಗಿದೆ. ಮಳೆ ಬೇಡ ಎಂದು ಪೂಜೆ ಸಲ್ಲಿಸುವ ಸ್ಥಿತಿ ಇದೆ,’ ಎಂದು ಪ್ರತಿಕ್ರಿಯಿಸಿದರು.

‘ಶಾರದಾಂಬೆ ದರ್ಶನ ಪಡೆದು, ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ಗೌರಿಗದ್ದೆಯ ಮಠದಲ್ಲಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.