ADVERTISEMENT

ಸಿದ್ದರಾಮಯ್ಯಗೆ ತಲೆಕೆಟ್ಟಿದೆ, ಅವರ ಪಾಪದ ಕೂಸು ಪಿಎಫ್‌ಐ: ಯಡಿಯೂರಪ್ಪ ಆಕ್ರೋಶ

ಆರ್‌ಎಸ್‌ಎಸ್ ವಿರುದ್ಧ ಅನವಶ್ಯಕ ಮಾತು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 13:24 IST
Last Updated 29 ಸೆಪ್ಟೆಂಬರ್ 2022, 13:24 IST
ಬಿ.ಎಸ್. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ
ಬಿ.ಎಸ್. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ   

ಶಿವಮೊಗ್ಗ: ‘ಆರ್‌ಎಸ್‍ಎಸ್ ವಿರುದ್ಧ ಅನವಶ್ಯಕವಾಗಿ ಮಾತನಾಡುತ್ತಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಲೆ ಕೆಟ್ಟಿದೆ. ಹೀಗಾಗಿ, ಸಂಘಟನೆ ವಿರುದ್ಧ ಹುಚ್ಚುಹುಚ್ಚಾಗಿ ಮಾತಾಡುತ್ತಿದ್ದಾರೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಕಟಕಿಯಾಡಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ಮೇಲೇತ್ತಿದ್ದು ಸಿದ್ದರಾಮಯ್ಯ. ಅದು ಅವರದ್ದೇ ಪಾಪದ ಕೂಸು’ ಎಂದು ಟೀಕಿಸಿದರು.

‘ಪಿಎಫ್‌ಐ ನಿಷೇಧಿಸಿರುವ ಕೇಂದ್ರದ ನಿರ್ಧಾರದ ಪರ ಇಡೀ ದೇಶದ ಜನರು ಇದ್ದಾರೆ. ಹೀಗಾಗಿ ಏನು ಮಾತಾಡಬೇಕು ಎಂದು ತೋಚದೇ ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಿದ್ದಾರೆ. ಪಿಎಫ್‌ಐ ಈ ಮಟ್ಟಕ್ಕೆ ಬೆಳೆಯಲು ಮೂಲ ಕಾರಣ ಅವರೇ. ಈಗಲಾದರೂ ತಪ್ಪಿನ ಅರಿವಾಗಿ ಪ್ರಾಮಾಣಿಕವಾಗಿ ಯೋಚಿಸುವುದನ್ನು ಬಿಟ್ಟು ಆರ್‌ಎಸ್‌ಎಸ್‌ ಬಗ್ಗೆ ಹಗುರವಾಗಿ ಮಾತಾಡುವುದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ನಾವೆಲ್ಲರೂ ಸಂಘ ಪರಿವಾರದಿಂದಲೇ ಬಂದವರು. ಸಂಘದ ಬಗ್ಗೆ ಸರಿಯಾಗಿ ತಿಳಿಯದೇ ಮಾತನಾಡುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವಂತಹದ್ದಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.