ADVERTISEMENT

ಬಿಎಸ್‌ಎನ್‌ಎಲ್‌ಗೆ ₹ 44.18 ಕೋಟಿ ಬಾಕಿ: ಕ್ರಮ ತೆಗೆದುಕೊಳ್ಳುವಂತೆ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 16:08 IST
Last Updated 3 ನವೆಂಬರ್ 2025, 16:08 IST
   

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್‌ ಸಂಚಾರ್‌ ನಿಗಮಕ್ಕೆ (ಬಿಎಸ್‌ಎನ್‌ಎಲ್‌) ಒಟ್ಟು ₹44.18 ಕೋಟಿ ಮೊತ್ತದ ಬಿಲ್‌ ಪಾವತಿಸಲು ಉಳಿಸಿಕೊಂಡಿವೆ.

ಈ ಪೈಕಿ, ಗೃಹ ಇಲಾಖೆಯು ಅತೀ ಹೆಚ್ಚು ಅಂದರೆ, ₹15.89 ಕೋಟಿ ಪಾವತಿಸಲು ಬಾಕಿ ಇದೆ. ಉಳಿದಂತೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಸೆಂಟರ್‌ ಫಾರ್‌ ಇ– ಗರ್ವರ್ನೆನ್ಸ್‌ ₹4.25 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆ (ಗ್ರಾಮ ಪಂಚಾಯತ್‌) ₹3.50 ಕೋಟಿ, ಕಿಯೋನಿಕ್ಸ್‌ ₹2 ಕೋಟಿ ಪಾವತಿಸಬೇಕಿದೆ.

ಬಿಲ್‌ ಬಾಕಿ ಮೊತ್ತವನ್ನು ತಕ್ಷಣ ಪಾವತಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಕೇಂದ್ರ  ಸರ್ಕಾರದ ದೂರ ಸಂಪರ್ಕ ಇಲಾಖೆಯ ಕಾರ್ಯದರ್ಶಿ ನೀರಜ್‌ ಮಿತ್ತಲ್‌ ಅವರು ಆಗಸ್ಟ್‌ 29ರಂದು ಎರಡನೇ ಬಾರಿಗೆ ಪತ್ರ ಬರೆದಿದ್ದಾರೆ.

ADVERTISEMENT

ಬಿಲ್‌ ಮೊತ್ತ ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಮುಖ್ಯಸ್ಥರು ಹಾಗೂ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳ ಕಾರ್ಯದರ್ಶಿಗಳಿಗೆ ಮಿತ್ತಲ್‌ ಅವರು ಬರೆದಿರುವ ಈ ಪತ್ರದ ಸಹಿತ ಸೂಚನೆ ನೀಡಿರುವ ಡಿಪಿಎಆರ್, ಬಾಕಿ ಬಿಲ್‌ ಪಾವತಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.

ಈ ಪತ್ರಕ್ಕೂ ಮೊದಲು ಇದೇ ಮೇ 14ರಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಮಿತ್ತಲ್‌, 2025ರ ಮಾರ್ಚ್‌ 31ರವರೆಗೆ ವಿವಿಧ ಇಲಾಖೆಗಳು ₹69.36 ಕೋಟಿ ಮೊತ್ತದ ಬಿಲ್‌ ಬಾಕಿ ಉಳಿಸಿಕೊಂಡಿರುವ ಮಾಹಿತಿ ನೀಡಿದ್ದರು. ಬಿಎಸ್‌ಎನ್‌ಎಲ್‌ನ ಆರ್ಥಿಕ ಪರಿಸ್ಥಿತಿಯನ್ನು ಈ ಪತ್ರದಲ್ಲಿ ವಿವರಿಸಿದ್ದ ಅವರು, ಬಾಕಿ ಬಿಲ್‌ ಮೊತ್ತವನ್ನು ಇಲಾಖೆಗಳು ಪಾವತಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು. ಆ ಪತ್ರವನ್ನು ಉಲ್ಲೇಖಿಸಿ ಡಿಪಿಎಆರ್‌ ಜೂನ್‌ 12ರಂದು ನೀಡಿದ್ದ ಸೂಚನೆಗೆ ಸ್ಪಂದಿಸಿದ್ದ ಕೆಲವು ಇಲಾಖೆಗಳು ಬಿಲ್‌ ಮೊತ್ತವನ್ನು ಪಾವತಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.