ADVERTISEMENT

ಉಪ ಚುನಾವಣೆ | ಇಂದು ಮತದಾನ: ಬಿ.ಎಸ್.ಯಡಿಯೂರಪ್ಪ ಭವಿಷ್ಯ ನಿರ್ಣಯ

13 ಅನರ್ಹ ಶಾಸಕರ ಹಣೆಬರಹ ಇಂದು ನಿರ್ಧಾರ: ವಿರೋಧ ಪಕ್ಷಗಳ ಸವಾಲಿನ ಉ‍ಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 20:00 IST
Last Updated 4 ಡಿಸೆಂಬರ್ 2019, 20:00 IST
ಬೆಂಗಳೂರಿನಲ್ಲಿ ಬುಧವಾರ ಉಪ ಚುನಾವಣೆಗೆ ನಿಯೋಜಿತವಾಗಿರುವ ಅಧಿಕಾರಿಗಳು ಇವಿಎಂ ಹಾಗೂ ಇತರ ಚುನಾವಣಾ ಸಾಮಾಗ್ರಿಗಳೊಂದಿಗೆ ಮತಗಟ್ಟೆಗೆ ತೆರಳಿದರು -ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಬುಧವಾರ ಉಪ ಚುನಾವಣೆಗೆ ನಿಯೋಜಿತವಾಗಿರುವ ಅಧಿಕಾರಿಗಳು ಇವಿಎಂ ಹಾಗೂ ಇತರ ಚುನಾವಣಾ ಸಾಮಾಗ್ರಿಗಳೊಂದಿಗೆ ಮತಗಟ್ಟೆಗೆ ತೆರಳಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಾಲ್ಕು ತಿಂಗಳ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ 15 ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಗುರುವಾರ ನಡೆಯಲಿದೆ.

ಡಿ.9ರಂದು ಮತ ಎಣಿಕೆ ನಡೆಯಲಿದ್ದು, ಕನಿಷ್ಠ 7 ಸ್ಥಾನ ಗೆಲ್ಲದೇ ಇದ್ದರೆ ಅಂದಿನ ವಿಧಾನಸಭೆಯ ಸದಸ್ಯ ಬಲದ ಲೆಕ್ಕಾಚಾರದಲ್ಲಿ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ. ಸರ್ಕಾರ ಉಳಿಸಿಕೊಳ್ಳಲು ಅನ್ಯದಾರಿ ಹಿಡಿಯಬೇಕಾದ ಅನಿವಾರ್ಯತೆಗೆ ಕಮಲ ಪಕ್ಷದ ನಾಯಕರು ಸಿಲುಕಲಿದ್ದಾರೆ.

ಈ ಲೆಕ್ಕಾಚಾರದಲ್ಲಿ ಸದ್ಯ ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳು ಬಿಜೆಪಿ ಪಾಲಿಗೆ ಅತ್ಯಂತ ನಿರ್ಣಾಯಕವಾಗಿವೆ. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದಾಗಿ ಆ ಸರ್ಕಾರ ಪತನಗೊಂಡಿತ್ತು. ರಾಜೀನಾಮೆ ಕೊಟ್ಟ ಕಾಂಗ್ರೆಸ್‌ನ 13, ಜೆಡಿಎಸ್‌ನ 3 ಹಾಗೂ ಕಾಂಗ್ರೆಸ್ ಸಹ ಸದಸ್ಯನಾಗಿದ್ದುಕೊಂಡು ಬೆಂಬಲ ಹಿಂಪಡೆದು, ಬಿಜೆಪಿಗೆ ಬೆಂಬಲ ಕೊಟ್ಟ ಒಬ್ಬ ಪಕ್ಷೇತರ ಸೇರಿ 17 ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಅನರ್ಹತೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಈ ಎಲ್ಲರೂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ADVERTISEMENT

ಅನರ್ಹಗೊಳಿಸಿದ ಸಭಾಧ್ಯಕ್ಷರ ಕ್ರಮವನ್ನು ಎತ್ತಿಹಿಡಿದಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ, ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿತ್ತು.

2018ರಲ್ಲಿ ನಡೆದ ಚುನಾವಣೆ ಫಲಿತಾಂಶ ಪ್ರಶ್ನಿಸಿದ ವಿವಾದ ಕೋರ್ಟ್‌ನಲ್ಲಿರುವುದರಿಂದ ಮಸ್ಕಿ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿಲ್ಲ. ಉಳಿದ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಮಾತ್ರ ಅನರ್ಹರಿಗೆ ಬಿಜೆಪಿ ಟಿಕೆಟ್ ನೀಡಿದೆ. ಶಿವಾಜಿನಗರದಲ್ಲಿ ಆರ್. ರೋಷನ್ ಬೇಗ್ ಬದಲು ಎಂ. ಶರವಣ, ರಾಣೆಬೆನ್ನೂರಿನಲ್ಲಿ ಆರ್. ಶಂಕರ್ ಬದಲಿಗೆ ಅರುಣ್‌ಕುಮಾರ್‌ ಪೂಜಾರ್ ಅವರನ್ನು ಕಣಕ್ಕೆ ಇಳಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದೇವೇಂದ್ರ ಫಡಣವೀಸ್‌, ಬಹುಮತ ಸಾಬೀತುಪಡಿಸಲಾಗದೇ ರಾಜೀನಾಮೆ ಕೊಟ್ಟ ಬಳಿಕ, ಕರ್ನಾಟಕದಲ್ಲಿರುವ ತಮ್ಮ ಸರ್ಕಾರ ಉಳಿಸಿಕೊಳ್ಳುವುದು ರಾಷ್ಟ್ರೀಯ ನಾಯಕರಿಗೆ ಪ್ರತಿಷ್ಠೆಯಾಗಿದೆ. ಗರಿಷ್ಠ 12 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಯಡಿಯೂರಪ್ಪಗೆ ನೀಡಿದ್ದು, ಚುನಾವಣಾ ಫಲಿತಾಂಶದ ಮೇಲೆ ಕಣ್ಣು ಇಟ್ಟಿದ್ದಾರೆ.

ಅಧಿಕಾರ ಉಳಿಸಿಕೊಳ್ಳುವ ಜತೆಗೆ ರಾಷ್ಟ್ರೀಯ ನಾಯಕರ ಅವಕೃಪೆಗೆ ಒಳಗಾಗದಂತೆ ವಿಶ್ವಾಸ ಸಾಬೀತುಪಡಿಸಬೇಕಾದ ಸಂಕಷ್ಟಕ್ಕೆ ಯಡಿಯೂರಪ್ಪ ಸಿಲುಕಿದ್ದಾರೆ. ಈ ಕಾರಣಕ್ಕಾಗಿ ಕೊನೆ ಗಳಿಗೆಯವರೆಗೂ ಚುನಾವಣೆಯಲ್ಲಿ ಗೆಲ್ಲುವ ರಣತಂತ್ರ ರೂಪಿಸುವಲ್ಲಿಯೇ ಅವರು ಮಗ್ನರಾಗಿದ್ದರು.

ಬುಧವಾರ ಮನೆಯಲ್ಲಿಯೇ ಉಳಿದುಕೊಂಡ ಯಡಿಯೂರಪ್ಪ, ಸಚಿವರಾದ ಜೆ.ಸಿ. ಮಾಧುಸ್ವಾಮಿ, ಆರ್. ಅಶೋಕ್‌ ಹಾಗೂ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಜತೆ ಸುದೀರ್ಘ ಹೊತ್ತು ಸಮಾಲೋಚನೆ ನಡೆಸಿದರು. ಗೆಲ್ಲಲು ಸವಾಲಾಗಿರುವ ಯಶವಂತಪುರ, ಕೆ.ಆರ್.ಪೇಟೆ, ಹುಣಸೂರು, ಹೊಸಕೋಟೆಗಳಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕಾದ ಸೂತ್ರ ಹೆಣೆದರು ಎಂದು ಗೊತ್ತಾಗಿದೆ.

ಸಿದ್ದರಾಮಯ್ಯಗೂ ಅಗ್ನಿ ಪರೀಕ್ಷೆ

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಪಾಲಿಗೆ ಉಪಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸುವುದು ಅಗ್ನಿ ಪರೀಕ್ಷೆಯಾಗಿದೆ.

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಮುಂದುವರಿಯುವುದು ಇಷ್ಟವಿಲ್ಲದ ಕಾರಣಕ್ಕೆ ತಮ್ಮ ‘ಆಪ್ತ’ರಿಂದ ರಾಜೀನಾಮೆ ಕೊಡಿಸಿ, ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯನವರೇ ಎಂದು ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಟೀಕಿಸಿದ್ದುಂಟು. ರಾಜೀನಾಮೆ ಕೊಟ್ಟ ಶಾಸಕರ ಪೈಕಿ 13 ಜನರು ಕಾಂಗ್ರೆಸ್‌ನವರೇ ಆಗಿದ್ದು, ಅವರನ್ನು ಸೋಲಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಸವಾಲು ಸಿದ್ದರಾಮಯ್ಯನವರ ಎದುರಿಗೆ ಇದೆ.

ಸೂರಜ್ ರೇವಣ್ಣ ವಿರುದ್ಧ ಮೊಕದ್ದಮೆ

ಚನ್ನರಾಯಪಟ್ಟಣ ತಾಲ್ಲೂಕಿನ ನಂಬಿಹಳ್ಳಿಯಲ್ಲಿ(ಕೆ.ಆರ್. ಪೇಟೆ ಗಡಿಭಾಗ) ಮಂಗಳವಾರ ಮಧ್ಯರಾತ್ರಿ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಪುತ್ರ ಸೂರಜ್‌ ರೇವಣ್ಣ ಹಾಗೂ ಇತರೆ 7 ಜನರ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಹಣ ಹಂಚುತ್ತಿದ್ದಾರೆಂದು ಆರೋಪಿಸಿದ ಜೆಡಿಎಸ್‌ ಕಾರ್ಯಕರ್ತರು ತೋಟದ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಘರ್ಷಣೆ ನಡೆದಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಹಣ ಹಂಚುತ್ತಿದ್ದಾರೆಂಬ ಆರೋಪದ ಮೇಲೆ ಜೆಡಿಎಸ್‌ನ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

***

ಮಳೆ, ಗಾಳಿ, ಚಳಿ ಲೆಕ್ಕಿಸದೆ ಎಲ್ಲರೂ ಮತದಾನ ಮಾಡಬೇಕು. ಶೇ 85ಕ್ಕಿಂತ ಹೆಚ್ಚು ಮಂದಿ ಮತದಾನ ಮಾಡಿದರೆ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ

–ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ

ಅನರ್ಹರ ಬಗ್ಗೆ ಪಕ್ಷಾತೀತ ಪ್ರತಿರೋಧ ಇದೆ. ಇದೊಂದು ಬಾರಿ ಪಕ್ಷನಿಷ್ಠೆ ಪಕ್ಕಕ್ಕಿಟ್ಟು ದೇಶದ ಹಿತಕ್ಕಾಗಿ ಅನರ್ಹರ ವಿರುದ್ಧ ಮತ ಚಲಾಯಿಸಿ

–ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ

ಅನರ್ಹರ ವಿರುದ್ಧ ತೀರ್ಪು ನೀಡುವ ಪರಮಾಧಿಕಾರ ರಾಜ್ಯದ ಜನರಿಗೆ ಸಿಕ್ಕಿದೆ. ಆಮಿಷಕ್ಕೆ ಒಳಗಾಗದೆ ರಾಜ್ಯದ ಘನತೆ ಎತ್ತಿ ಹಿಡಿಯುವ ತೀರ್ಪು ನೀಡಿ

–ಎಚ್.ಡಿ. ದೇವೇಗೌಡ, ಜೆಡಿಎಸ್‌ ವರಿಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.