ಬಿಎಸ್‌ವೈ
ಬೆಂಗಳೂರು: ಜಾತಿ ಮತ್ತು ಸಮುದಾಯದ ಹೆಸರಿನಲ್ಲಿ ಸಭೆ– ಸಮಾವೇಶಗಳನ್ನು ನಡೆಸಬಾರದು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸೂಚನೆ ನೀಡಿದ್ದಾರೆ.
ರೇಣುಕಾಚಾರ್ಯ ಅವರನ್ನು ತಮ್ಮ ಮನೆಗೆ ಬುಧವಾರ ರಾತ್ರಿ ಕರೆಸಿಕೊಂಡಿದ್ದ ಯಡಿಯೂರಪ್ಪ ಅವರು, ‘ಯಾವುದೇ ಸಭೆ– ಸಮಾವೇಶ ನಡೆಸಿ ಗೊಂದಲ ಸೃಷ್ಟಿಸುವುದು ಬೇಡ. ಏನೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಮಾತುಕತೆ ಮಾಡಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಹೇಳಿದರು.
ಇದೇ ವೇಳೆ ಯಡಿಯೂರಪ್ಪ ಅವರು ಬಿ.ವೈ.ವಿಜಯೇಂದ್ರ ಅವರನ್ನು ಕರೆಸಿಕೊಂಡು, ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂದು ಸೂಚಿಸಿದ್ದಾಗಿ ಮೂಲಗಳು ತಿಳಿಸಿವೆ.
‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೆಟ್ಟ ಆಡಳಿತ ನೀಡುತ್ತಿದೆ. ಅವರಲ್ಲೇ ಕಿತ್ತಾಟ ನಡೆಯುತ್ತಿದೆ. ಮುಖ್ಯಮಂತ್ರಿ ಬದಲಾಗುವ ಸಾಧ್ಯತೆಯೂ ಇದೆ. ಈ ಹಂತದಲ್ಲಿ ನಮ್ಮ ನಡವಳಿಕೆಗಳು ಅವರಿಗೆ ಅಸ್ತ್ರ ಆಗಬಾರದು. ಆದ್ದರಿಂದ ಕೆಲವು ದಿನಗಳು ಸುಮ್ಮನಿರಿ. ಅಧ್ಯಕ್ಷರ ಆಯ್ಕೆ ಆಗಲಿ’ ಎಂದು ಹೇಳಿದರು. ಇದರ ಬೆನ್ನಲ್ಲೇ ಎಂ.ಪಿ.ರೇಣುಕಾಚಾರ್ಯ ಅವರು ತಮ್ಮ ಮಾತಿನ ಧಾಟಿಯನ್ನು ಬದಲಿಸಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ರೇಣುಕಾಚಾರ್ಯ, ‘ಬಸನಗೌಡ ಪಾಟೀಲ ಯತ್ನಾಳ ಅವರು ನಮ್ಮ ಸಮುದಾಯದ ಮುಖಂಡರು. ಹಿಂದೆ ಕೆಲವರು ನನ್ನನ್ನು ಅಸ್ತ್ರವಾಗಿ ಬಳಸಿಕೊಂಡಂತೆ ಯತ್ನಾಳ ಅವರನ್ನೂ ಬಳಸಿಕೊಳ್ಳಬಹುದು. ಆದ್ದರಿಂದ ಎಚ್ಚರಿಕೆಯಿಂದ ಇರುವಂತೆ ಅವರಿಗೆ ಮನವಿ ಮಾಡುತ್ತೇನೆ’ ಎಂದು ಹೇಳಿದರು.
‘ಯತ್ನಾಳ ಅವರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ನಿಮ್ಮನ್ನು ನನ್ನಂತೆ ಬಲಿಪಶು ಮಾಡಬಹುದು. ನಾನು ಆತ್ಮಾವಲೋಕನ ಮಾಡಿಕೊಂಡು, ಯಾರ ದಾಳವೂ ಆಗದೇ ಈಗ ಯಡಿಯೂರಪ್ಪ ಅವರ ಜತೆ ಗಟ್ಟಿಯಾಗಿ ನಿಂತಿದ್ದೇನೆ’ ಎಂದರು.
‘ಹಾಗೆಂದು ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ರಾಜೀಯೂ ಇಲ್ಲ. ಸಮುದಾಯದ ಸಂಘಟನೆ ಮಾಡುವ ಕೆಲಸ ಮುಂದುವರಿಸುತ್ತೇನೆ. ಯತ್ನಾಳ ಅವರು ಸೇರಿ ಯಾರು ಬೇಕಾದರೂ ನಮ್ಮ ಜತೆ ಬರಬಹುದು. ಒಳಪಂಗಡ ಮತ್ತಿತರ ಹೆಸರಿನಲ್ಲಿ ನಮ್ಮ ಸಮಾಜ ಒಡೆಯುವ ಕೆಲಸ ನಡೆಯುತ್ತಿದೆ. ಆದ್ದರಿಂದ, ನಮ್ಮ ನಮ್ಮಲ್ಲಿ ಸಂಘರ್ಷ ಬೇಡ, ಒಗಟ್ಟಾಗಿ ಎಲ್ಲರೂ ಮುನ್ನಡೆಯಬೇಕು. ಆಗ ಸಮುದಾಯ ಬಲಿಷ್ಠವಾಗುತ್ತದೆ’ ಎಂದು ರೇಣುಕಾಚಾರ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.