ADVERTISEMENT

ಟಿಪ್ಪು ಬದಲು ಕಲಾಂ, ನಜೀರ್‌ ಸಾಬ್ ಪ್ರತಿಮೆ ನಿರ್ಮಿಸಿ: ಸಂಸದ ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 13:07 IST
Last Updated 15 ನವೆಂಬರ್ 2022, 13:07 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮಡಿಕೇರಿ: ಪ್ರತಿಮೆ ನಿರ್ಮಿಸಲೇಬೇಕು ಎಂಬ ಹಠಕ್ಕೆ ಬಿದ್ದರೆ ಎಪಿಜೆ ಅಬ್ದುಲ್‌ ಕಲಾಂ ಅಥವಾ ಅಬ್ದುಲ್‌ ನಜೀರ್‌ಸಾಬ್‌ ಅವರ ಪ್ರತಿಮೆ ನಿರ್ಮಿಸಲಿ. ಅದನ್ನು ಬಿಟ್ಟು ಕನ್ನಡವನ್ನು ಕಗ್ಗೊಲೆ ಮಾಡಿ ಟಿಪ್ಪು ಪ್ರತಿಮೆ ನಿರ್ಮಿಸಿದರೆ ಯಾರೂ ಒಪ್ಪುವುದಿಲ್ಲ ಎಂದು ಸಂಸದ ಪ್ರತಾಪಸಿಂಹ ಇಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರಿನಲ್ಲಿನ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯನ್ನು ನೋಡಿದವರಿಗೆ ಬೆಂಗಳೂರನ್ನು ಉದಾಹರಣೆಗೆ ತೋರಿಸಬಹುದು. ಟಿಪ್ಪುವಿನ ಪ್ರತಿಮೆ ನಿರ್ಮಿಸಿದರೆ ಕೊಡವರನ್ನು ಮೋಸದಿಂದ ಕೊಂದ ಪ್ರಸಂಗವನ್ನು, ದೇಗುಲದ ಮೇಲೆ ದಾಳಿ ನಡೆಸಿದ್ದನ್ನು, ಕನ್ನಡದ ಬದಲಿಗೆ ಪರ್ಷಿಯನ್‌ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಜಾರಿಗೊಳಿಸುವ ಮೂಲಕ ಕನ್ನಡದ ಕಗ್ಗೊಲೆ ಮಾಡಿದ್ದನ್ನು ಹೇಳುತ್ತೀರಾ ಎಂದು ಪ್ರಶ್ನಿಸಿದರು.

ಅರಣ್ಯ ಇಲಾಖೆಯು ವೀರಪ್ಪನ್‌ ಜಯಂತಿ ಮಾಡುವುದೂ ಒಂದೇ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಟಿಪ್ಪು ಜಯಂತಿ ಮಾಡುವುದೂ ಒಂದೇ. ಒಂದು ವೇಳೆ ಟಿಪ್ಪು ಪರಂಪರೆ ಮುಂದುವರಿದಿದ್ದರೆ ಕೊಡಗನ್ನು ಜಫರಾಬಾದ್‌ ಎಂದು, ಮೈಸೂರನ್ನು ನಜರಾಬಾದ್ ಎಂದೂ, ಹಾಸನವನ್ನು ಕೈಮಾಬಾದ್ ಎಂದು ಕರೆಯಬೇಕಿತ್ತು ಎಂದರು.

ADVERTISEMENT

4 ಜನ ಹುಲಿ ಚರ್ಮದ ತರಹ ಇರುವ ಬಾವುಟ ಹಾಕಿಕೊಂಡು ಓಡಾಡಿದರೆ ಟಿಪ್ಪು ಮೈಸೂರು ಹುಲಿ ಆಗುವುದಿಲ್ಲ. ಹಾಗೆ ನೋಡುವುದಾದರೆ ಟಿಪ್ಪುವಿಗಿಂತ ಹೈದರಾಲಿ ಸೇನಾನಿಯಾಗಿದ್ದ. ಟಿಪ್ಪು ಕೋಟೆಯಿಂದ ಹೊರಗಡೆ ಬರಲೇ ಇಲ್ಲ. ಒಂದು ವೇಳೆ ಆತನ ಬಳಿ ಕ್ಷಿಪಣಿ ಇದ್ದಿದ್ದರೆ ಬ್ರಿಟಿಷರ ವಿರುದ್ಧ ಪ್ರಯೋಗಿಸಿ ಗೆಲ್ಲಬಹುದಿತ್ತು. ಕೋಟೆ ಒಳಗೆ ಸತ್ತ ಟಿಪ್ಪುವಿನ ಕುರಿತು ಅತಿರಂಜಕ, ಕಾಗಕ್ಕ, ಗೂಬಕ್ಕ ಕಥೆ ಹೇಳುವುದನ್ನು ಇನ್ನಾದರೂ ಬಿಡಬೇಕು ಎಂದು ಹೇಳಿದರು.

ಟಿಪ್ಪು ಹುಟ್ಟಿದ್ದು ದೇವನಹಳ್ಳಿಯಲ್ಲಿ, ಇದ್ದದ್ದು ಶ್ರೀರಂಗಪಟ್ಟಣದಲ್ಲಿ. ಮೈಸೂರಿಗೂ ಟಿಪ್ಪುವಿಗೂ ಸಂಬಂಧವೇ ಇಲ್ಲ. ಮೈಸೂರು ಏನಿದ್ದರೂ ಮಹಾರಾಜರ ನೆಲೆಯೆ ಹೊರತು ಟಿಪ್ಪುವಿನ ನೆಲೆಯಾಗಲು ಬಿಡುವುದಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.