ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ‘ಗ್ಯಾರಂಟಿ’ ಎಂದು ಜಪಿಸುತ್ತಾ ತೆರಿಗೆದಾರರ ಹಣವನ್ನು ಲೂಟಿ ಮಾಡುತ್ತಿದೆ ಮತ್ತು ಆ ಹಣವನ್ನು ತನ್ನ ಹೈಕಮಾಂಡ್‌ಗೆ ಕಳುಹಿಸುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಕರ್ನಾಟಕವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ, ರಾಹುಲ್ ಗಾಂಧಿಗೆ ಎಟಿಎಂ ಮಾಡಿಕೊಟ್ಟಿದ್ದೇ ಸಿದ್ದರಾಮಯ್ಯ ಸರ್ಕಾರದ ಎರಡೂವರೆ ವರ್ಷಗಳ ಸಾಧನೆ ಎಂದು ಸುದ್ದಿಗಾರರ ಜತೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.
ಎರಡೂವರೆ ವರ್ಷಗಳಲ್ಲಿ ಯಾವುದಾದರೂ ಒಂದು ಹೊಸ ಯೋಜನೆಯನ್ನು ಜಾರಿ ಮಾಡಿದ್ದಾರಾ? ತನ್ನ ಅಸಂಖ್ಯಾತ ತಪ್ಪುಗಳು ಮತ್ತು ವೈಫಲ್ಯಗಳನ್ನು ಮುಚ್ಚಿಕೊಳ್ಳಲು ದಿನಕ್ಕೊಂದು ಹೊಸ ನಾಟಕ ಆಡುತ್ತಿದ್ದಾರೆ. ಒಂದು ದಿನ ಆರ್‌ಎಸ್‌ಎಸ್ ನಿಷೇಧ ಮಾಡುತ್ತೇವೆ ಎನ್ನುತ್ತಾರೆ, ಇನ್ನೊಂದು ದಿನ ಮೋದಿ ಹಣ ಕೊಟ್ಟಿಲ್ಲ ಎನ್ನುತ್ತಾರೆ. ಕರ್ನಾಟಕಕ್ಕೆ ಮೋದಿ ಅನ್ಯಾಯ ಮಾಡಿಲ್ಲ. ಆದರೆ ಸಿದ್ದರಾಮಯ್ಯ ಏನು ಕೊಟ್ಟಿದ್ದಾರೆ? ಎರಡು ವರ್ಷಗಳಲ್ಲಿ ಕೊಟ್ಟಿರುವ ಒಂದಾದರೂ ಹೊಸ ಯೋಜನೆ ಹೇಳಲಿ ಎಂದು ವಿಜಯೇಂದ್ರ ತಿಳಿಸಿದರು.
ಕರ್ನಾಟಕದ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿ ಎಂದರು. ಇವರ ಮಾದರಿ ನೆಚ್ಚಿಕೊಂಡು ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿ ಮಾಡಿತು. ಆದರೆ, ಅಲ್ಲಿನ ಮುಖ್ಯಮಂತ್ರಿ ದೇವಸ್ಥಾನಗಳಿಗೆ ಪತ್ರ ಬರೆದು ನೌಕರರಿಗೆ ಸಂಬಳ ಕೊಡಲು ಹಣವಿಲ್ಲ, ದೇವಸ್ಥಾನದ ಹಣ ಕೊಡಿ ಎನ್ನುತ್ತಿದ್ದಾರೆ. ತೆಲಂಗಾಣದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಅನುಷ್ಠಾನ ಮಾಡಿತು. ಗ್ಯಾರಂಟಿಯಿಂದ ಹಣಕಾಸು ಸ್ಥಿತಿ ಹದಗೆಟ್ಟು ಹೋಗಿದೆ ಎಂದು ಅಲ್ಲಿನ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಇದು ಕರ್ನಾಟಕದ ಕಾಂಗ್ರೆಸ್‌ನ ಗ್ಯಾರಂಟಿ ಮಾದರಿ ಎಂದು ವ್ಯಂಗ್ಯವಾಡಿದರು.
ಕರ್ನಾಟಕದಲ್ಲೂ ಹಣಕಾಸು ಪರಿಸ್ಥಿತಿ ಭಿನ್ನವಾಗಿಲ್ಲ. ಒಂದು ಕಡೆ ಅಭಿವೃದ್ಧಿಗೆ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಮಂಡ್ಯದಲ್ಲಿ ವಿಆರ್‌ಎಸ್ ಹಣ ಬಂದಿಲ್ಲ ಎಂದು ನಿವೃತ್ತ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಕಲಬುರಗಿಯಲ್ಲಿ ಆರು ತಿಂಗಳು ಸಂಬಳ ಬಂದಿಲ್ಲ ಎಂದು ಗ್ರಂಥಪಾಲಕಿ ಆತ್ಮಹತ್ಯೆ ಮಾಡಿಕೊಂಡರು. ಎಷ್ಟೋ ನೌಕರರು ಸಂಬಳ ಇಲ್ಲದೆ ವೇದನೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಮರಳುಮಾಫಿಯಾದಿಂದ ಸರ್ಕಾರ ಬೊಕ್ಕಸಕ್ಕೆ ₹400 ಕೋಟಿ ನಷ್ಟವಾಗುತ್ತಿದೆ ಎಂಬ ವಿಚಾರವನ್ನು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರೇ ಹೇಳಿದ್ದಾರೆ. ಇದೊಂದು ದೊಡ್ಡ ಹಗರಣ. ಜನರ ಗಮನ ಬೇರೆ ಕಡೆ ಸೆಳೆಯಲು ಮೋದಿ ಹಣ ಕೊಟ್ಟಿಲ್ಲ ಎನ್ನುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದರು.