ಬೆಂಗಳೂರು: ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿದ್ದೇ ಬಿಜೆಪಿ ರಾಜ್ಯ ಘಟಕದ ಇಂದಿನ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ಅಂದು ಜಾರಕಿಹೊಳಿ ಅವರನ್ನು ಸಿಲುಕಿಸುವಲ್ಲಿ ಈ ಇಬ್ಬರು ಪ್ರಮುಖ ರೂವಾರಿಗಳಾಗಿದ್ದರು. ಈಗಿನ ಹನಿಟ್ರ್ಯಾಪ್ ಪ್ರಕರಣದಲ್ಲೂ ಇದೇ ತಂಡ ಕೆಲಸ ಮಾಡಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಹನಿಟ್ರ್ಯಾಪ್ ಬಗ್ಗೆ ಸದನದಲ್ಲೇ ಹೇಳಿದ್ದಾರೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಉನ್ನತ ತನಿಖೆ ನಡೆಸಬೇಕು. ಆಗ ಸತ್ಯ ಹೊರಬರುತ್ತದೆ ಎಂದರು.
‘ಬಿಜೆಪಿಯಿಂದ ತಮ್ಮನ್ನು ಉಚ್ಚಾಟಿಸಲು ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರೇ ಕಾರಣ. ಸತ್ಯ ಮತ್ತು ನೇರ ಮಾತು ಸಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಈ ಇಬ್ಬರಿಗೂ ಬುದ್ಧಿಕಲಿಸದೆ ಬಿಡುವುದಿಲ್ಲ. ಅವರ ಭ್ರಷ್ಟಾಚಾರ, ಕುಟುಂಬ ರಾಜಕಾರಣದ ವಿರುದ್ಧ ಜನಜಾಗೃತಿ ಮೂಡಿಸಲು ರಾಜ್ಯದ ಎಲ್ಲೆಡೆ ಪ್ರವಾಸ ಮಾಡುತ್ತೇನೆ. ಸನಾತನ ಧರ್ಮ, ಹಿಂದೂ ಕಾರ್ಯಕರ್ತರಿಗಾಗಿ ಹೋರಾಟ ನಡೆಸುತ್ತೇನೆ. ಬಿಜೆಪಿಯನ್ನು ಮತ್ತೆ ಹಿಂದುತ್ವದ ಹಳಿಗೆ ತರುತ್ತೇನೆ’ ಎಂದರು.
ಬಿ.ವೈ. ರಾಘವೇಂದ್ರ ಹೊರತುಪಡಿಸಿ ಬಿಜೆಪಿಯ ಬಹುತೇಕ ಸಂಸದರು ವಿಜಯೇಂದ್ರ ವಿರುದ್ಧ ಇದ್ದಾರೆ. ವಿಜಯೇಂದ್ರ ಬಂಡವಾಳ ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಅಪ್ಪ–ಮಕ್ಕಳ ಕುಟುಂಬವನ್ನು ರಾಜಕೀಯದಿಂದ ದೂರ ಮಾಡುತ್ತೇನೆ. ವರಿಷ್ಠರು ಅವರನ್ನೇ ಮುಂದೊಂದು ದಿನ ಪಕ್ಷದಿಂದ ತೆಗೆಯಲಿದ್ದಾರೆ. ನಾನು ಮತ್ತೆ ಗೌರವಯುತವಾಗಿ ಬಿಜೆಪಿಗೆ ಮರಳುತ್ತೇನೆ. ಹಾಗಂತ ಮರುಪರಿಶೀಲನೆಗೆ ಮನವಿ ಮಾಡುವುದಿಲ್ಲ, ದೆಹಲಿಗೂ ಹೋಗುವುದಿಲ್ಲ ಎಂದು ಹೇಳಿದರು.
‘ರಾಜ್ಯದ ಯಾವ ಲಿಂಗಾಯತರೂ ಅವರ ಜತೆಗಿಲ್ಲ. ಯಡಿಯೂರಪ್ಪ ಮನೆಯಲ್ಲಿ ಕುಳಿತು ಮಗನನ್ನು ಮುಖ್ಯಮಂತ್ರಿ ಮಾಡುವ ಕನಸು ಕಾಣುತ್ತಿದ್ದಾರೆ. ಅದು ಆಗದ ಮಾತು. 2028ಕ್ಕೆ ನಾನೇ ಈ ರಾಜ್ಯದ ಮುಖ್ಯಮಂತ್ರಿಯಾಗುವೆ. ಈ ಮಾತನ್ನು ಅವರು ಸವಾಲಾಗಿ ಸ್ವೀಕರಿಸಲಿ’ ಎಂದು ಪಂಥಾಹ್ವಾನ ನೀಡಿದರು.
ಶನಿ ದೇವರಿಗೆ ಮೊರೆ
ಬಿಜೆಪಿಯಿಂದ ಉಚ್ಚಾಟನೆಗೊಂಡ ಯತ್ನಾಳ ಅವರು, ಬೆಂಗಳೂರಿನ ಮಿಲ್ಕ್ ಕಾಲೊನಿಯ ಶನಿ ಮಹಾತ್ಮ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದರು. ಒಬ್ಬರೇ ದೇವರ ಮುಂದೆ ಕುಳಿತು ಅರ್ಧ ಗಂಟೆ ಪ್ರಾರ್ಥನೆ ಸಲ್ಲಿಸಿದರು.
‘ಎರಡೂವರೆ ವರ್ಷಗಳಿಂದ ಸಮಸ್ಯೆ ಇತ್ತು. ಈಗ ಶನಿ ದೇವರ ಸ್ಥಾನ ಬದಲಾಗಿದೆ. ಹಿಂದೂ ಸಂಪ್ರದಾಯದ ಹೊಸ ವರ್ಷಕ್ಕೆ ಒಳ್ಳೆಯ ದಿನಗಳು ಆರಂಭವಾಗುತ್ತಿವೆ. ತಮ್ಮ ಭವಿಷ್ಯ ಉಜ್ವಲವಾಗಲಿದೆ’ ಎಂದು ಯತ್ನಾಳ ಹೇಳಿದರು.
ಪ್ರಯತ್ನಕ್ಕೆ ಸ್ಪಂದಿಸದ ಯತ್ನಾಳ: ವಿಜಯೇಂದ್ರ
‘ಬಸನಗೌಡ ಪಾಟೀಲ ಯತ್ನಾಳ ಅವರು ನಿರಂತರವಾಗಿ ಟೀಕೆ ಮಾಡಿದರೂ ಪಕ್ಷದ ಹಿತಕ್ಕಾಗಿ ಅವರನ್ನು ಭೇಟಿಯಾಗಿ ಗೊಂದಲ ಸರಿಪಡಿಸುವ ಕೆಲಸ ಮಾಡಿದೆ. ಅವರಿಂದ ಸ್ಪಂದನೆ ದೊರೆಯಲಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಧ್ಯಕ್ಷನಾಗಿ ಎಲ್ಲವನ್ನೂ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸದನದ ಅವಧಿಯಲ್ಲಿ ಭೋಜನಕೂಟಕ್ಕೂ ಅವರನ್ನು ಆಹ್ವಾನಿಸಿದ್ದೆ. ಕೇಂದ್ರದ ವರಿಷ್ಠರೂ ಹಲವು ಬಾರಿ ನೋಟಿಸ್ ಕೊಟ್ಟು ತಿದ್ದುವ ಪ್ರಯತ್ನ ಮಾಡಿದ್ದರು. ಸಾಕಷ್ಟು ಅವಕಾಶ ನೀಡಿದ್ದರು. ಅಂತಿಮವಾಗಿ ಉಚ್ಚಾಟನೆಯ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದರು.
‘ಯಡಿಯೂರಪ್ಪ ಅವರು ಹಲವರನ್ನು ಬೆಳೆಸಿದ್ದಾರೆ. ತಮ್ಮ ಜೀವನದಲ್ಲಿ ಮತ್ತೊಬ್ಬರನ್ನು ತುಳಿಯುವ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಸ್ವಂತ ಬಲದಲ್ಲಿ ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ವರಿಷ್ಠರು ನನಗೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಮಾಡಬೇಕು ಎಂದಲ್ಲ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.