ವಿಜಯೇಂದ್ರ
(ಸಂಗ್ರಹ ಚಿತ್ರ)
ಬೆಂಗಳೂರು: ‘ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗದ ಹತಾಶೆಯಿಂದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಅಕ್ರಮದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಬಳಿ ಪುರಾವೆಗಳಿದ್ದರೆ ನ್ಯಾಯಾಲಯಕ್ಕೆ ಸಲ್ಲಿಸಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲು ಹಾಕಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಹುಲ್ ಅವರು ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಪಾದಯಾತ್ರೆ ಮಾಡುತ್ತಾರಂತೆ. ಅವರು ಹತಾಶರಾಗಿದ್ದಾರೆ. ದಿಕ್ಕು ತೋಚುತ್ತಿಲ್ಲ. ಒಂದೆಡೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಬೀದಿಗೆ ಬಂದಿದ್ದಾರೆ. ಜಾಮೀನು ಪಡೆದಿದ್ದಾರೆ. ಕಾಂಗ್ರೆಸ್ ಮತ್ತು ರಾಹುಲ್ ನಡವಳಿಕೆ ಗಮನಿಸಿದರೆ ಅಯ್ಯೋ ಪಾಪ ಅನಿಸುತ್ತದೆ’ ಎಂದರು.
2024ರ ಲೊಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದು ಕಾಂಗ್ರೆಸ್ ಪ್ರಯತ್ನ ಮಾಡಿತ್ತು. ಆದರೆ, ಗೆಲುವು ಸಾಧ್ಯವಾಗಲಿಲ್ಲ. ಈಗ ಚುನಾವಣಾ ಅಕ್ರಮದ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿಗೆ ಅಕ್ರಮ ಎಸಗುವ ದಾರಿ ಗೊತ್ತಿದ್ದರೆ 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬಹುದಿತ್ತು. ಕಾಂಗ್ರೆಸ್ 136 ಸ್ಥಾನ ಹೇಗೆ ಪಡೆಯಿತು? ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಹೇಗೆ ಗೆಲುವು ಪಡೆಯಿತು ಎಂದು ಪ್ರಶ್ನಿಸಿದರು.
‘ಆಗಸ್ಟ್‌ನಲ್ಲಿ ಕರ್ನಾಟಕಕ್ಕೆ ಬಂದು ಏನು ಮಾಡುತ್ತಾರೆ ನೋಡುತ್ತೇವೆ. ಬಿಜೆಪಿ ಸುಮ್ಮನೆ ಕೂರದೇ ಕಾರ್ಯತಂತ್ರ ರೂಪಿಸಲಿದೆ. ರಾಜ್ಯದ ಪೊಲೀಸರು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಅವಕಾಶ ನೀಡುವುದಿಲ್ಲ. ಆದರೆ, ರಾಹುಲ್, ಸಿದ್ದರಾಮಯ್ಯ ಅವರು ಎಲ್ಲಿ ಬೇಕಾದರೂ ಪಾದಯಾತ್ರೆ ನಡೆಸಬಹುದು. ಮೆರವಣಿಗೆ ಮಾಡಬಹುದೇ? ಕಾನೂನು ಎಲ್ಲರಿಗೂ ಒಂದೇ ಇರಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.