ಬೆಂಗಳೂರು: ವಿಶ್ವ ಕುಂದಾಪ್ರ ಕನ್ನಡ ದಿನದ ಪ್ರಯುಕ್ತ ಕುಂದಾಪುರದ ಕನ್ನಡಿಗರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶುಭಾಶಯ ತಿಳಿಸಿದ್ದಾರೆ.
ಶುಭಾಶಯ ಕೋರಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಕುಂದಾಪುರ ಕನ್ನಡ ‘ಭಾಷಿ ಅಲ್ಲ, ಬದ್ಕ್' ಎಂದು ವಿಶಿಷ್ಟ ಸಂಸ್ಕೃತಿ ಆಚಾರ ವಿಚಾರಗಳ ಮೂಲಕ ತಮ್ಮ ಭಾಷೆ ಹಾಗೂ ಬದುಕನ್ನು ವಿಶ್ವಕ್ಕೆ ಪರಿಚಯಿಸಲು ಪ್ರತಿ ವರ್ಷ ಅಸಾಡಿ ಅಮಾವಾಸ್ಯೆಯಂದು ಕುಂದಾಪ್ರ ಕನ್ನಡ ದಿನವಾಗಿ ಆಚರಿಸುವ ಪ್ರೀತಿಯ ಮಾತುಗಳನ್ನಾಡುವ ಎಲ್ಲ ಕುಂದಾಪುರ ಕನ್ನಡಿಗರಿಗೆ ಶುಭಾಶಯಗಳು’ ಎಂದು ತಿಳಿಸಿದ್ದಾರೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕುಂದಾಪುರ ಕನ್ನಡ ದಿನದ ಶುಭಾಶಯ ಕೋರಿದ್ದಾರೆ.
‘ಕುಂದಾಪ್ರ ಕನ್ನಡ ಬರಿ ಭಾಷಿ ಅಲ್ಲ, ಅದ್ ನಮ್ ಬದಕ್. ಕುಂದಾಪ್ರದ್ ಸಂಸ್ಕೃತಿ ಸಂಪ್ರದಾಯ ಅಂಬುದು ರಾಜ್ಯದಂಗೆ ವಿಭಿನ್ನ. ನಮ್ಮ್ ಭಾಷಿ ಆತ್ಮೀಯತೆ, ಪ್ರೀತಿ, ಮಮತೆಯಿಂದ ತುಂಬಿ ತುಳುಕುವ ಭಾಷಿ. ಇವತ್ ಆಸಾಡಿ ಅಮಾಸಿ... ಇವತ್ ಕುಂದಾಪ್ರ ಕನ್ನಡ ದಿನ ಆಯಿ ಆಚಾರ್ಸುದ್.. ಈ ಗಳ್ಗಿಯಲ್ ಎಲ್ಲರಿಗೂ ವಿಶ್ವ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು’ ಎಂದು ಕುಂದಾಪುರ ಕನ್ನಡದಲ್ಲಿಯೇ ಶುಭಾಶಯ ತಿಳಿಸಿದ್ದಾರೆ.
ಕುಂದಾಪ್ರ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು ಮತ್ತು ಕುಂದಗನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಕರ್ಕಾಟಕ ಅಮಾವಾಸ್ಯೆ(ಆಷಾಢ ಅಮಾವಾಸ್ಯೆ) ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದೆ.
ಏತನ್ಮಧ್ಯೆ, ಕುಂದಾಪ್ರ ಕನ್ನಡ ಪ್ರತಿಷ್ಠಾನವು ಜುಲೈ 26, 27ಕ್ಕೆ ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್ ಬಳಿ ‘ಕುಂದಾಪುರ ಕನ್ನಡ ದಿನ’ವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.