ADVERTISEMENT

ರಾಜ್ಯ ಸಾರಿಗೆ ಪ್ರಯಾಣ ದುಬಾರಿ: ಟಿಕೆಟ್ ದರ ಶೇ.15 ಏರಿಕೆಗೆ ಸಂಪುಟ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 11:56 IST
Last Updated 2 ಜನವರಿ 2025, 11:56 IST
   

ಬೆಂಗಳೂರು: ಆಹಾರ ಧಾನ್ಯ, ತರಕಾರಿ, ದಿನ ಬಳಕೆಯ ವಸ್ತುಗಳ ದರ ಏರಿಕೆಯ ಭಾರದಿಂದ ಜನ ತತ್ತರಿಸುತ್ತಿರುವ ಮಧ್ಯೆಯೇ, ಚಾಲ್ತಿಯಲ್ಲಿರುವ ಬಸ್‌ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಿ ಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಹೊಸ ವರ್ಷದ ಆರಂಭದಲ್ಲೇ, ಗುರುವಾರ ನಡೆದ ಸಚಿವ ಸಂಪುಟ ಸಭೆಯು ನಾಲ್ಕು ಸಾರಿಗೆ ಸಂಸ್ಥೆಗಳು ಸಲ್ಲಿಸಿದ್ದ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದೆ. ಪರಿಷ್ಕೃತ ದರ ಇದೇ ಭಾನುವಾರ (ಜ.5ರಿಂದ) ಜಾರಿಗೆ ಬರಲಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು, ಡೀಸೆಲ್ ದರ ಏರಿಕೆಯಾಗಿರುವುದು, ಸಿಬ್ಬಂದಿ ವೆಚ್ಚ ಹೆಚ್ಚಳವಾಗಿರುವುದು ಮತ್ತು ಪ್ರಯಾಣ ದರ ಪರಿಷ್ಕರಣೆ ಮಾಡದೇ ಹಲವು ವರ್ಷಗಳೇ ಆಗಿರುವುದರಿಂದ ಈ ಬಾರಿ ಪರಿಷ್ಕರಣೆಗೆ ಒಪ್ಪಿಗೆ ನೀಡಲಾಯಿತು ಎಂದು ಸಮರ್ಥಿಸಿಕೊಂಡರು.

ADVERTISEMENT

ಹಿಂದೆ ದರ ಹೆಚ್ಚಳ ಮಾಡಿದಾಗ ರಾಜ್ಯದ 4 ಸಾರಿಗೆ ನಿಗಮಗಳ ಡೀಸೆಲ್‌ನ ಒಟ್ಟು ವೆಚ್ಚವು ₹9.16 ಕೋಟಿ ಇತ್ತು. ಈಗ ಆ ಮೊತ್ತವು ₹13.21 ಕೋಟಿಗೆ ಹೆಚ್ಚಳವಾಗಿದೆ. ಈ ನಾಲ್ಕೂ ಸಾರಿಗೆ ಸಂಸ್ಥೆಗಳಿಂದ ಪ್ರತಿ ದಿನ ಸಿಬ್ಬಂದಿ ವೆಚ್ಚವು ಆಗ ₹12.85 ಕೋಟಿ ಇದ್ದದ್ದು, ಈಗ ₹18.36 ಕೋಟಿಗೆ ಏರಿದೆ. ಪ್ರತಿದಿನ ₹9.56 ಕೋಟಿ ಹೆಚ್ಚುವರಿ ಹೊರೆ ಆಗುತ್ತಿದೆ. ಅದನ್ನು ಸರಿದೂಗಿಸಲು ದರ ಹೆಚ್ಚಿಸುವುದು ಅನಿವಾರ್ಯವಾಗಿತ್ತು ಎಂದು ಅವರು ಹೇಳಿದರು.

ಪರಿಷ್ಕರಣೆ ಎಷ್ಟು ಮಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಶೇ 13ರಿಂದ ಶೇ 15ರಷ್ಟು ಪರಿಷ್ಕರಣೆಯ ಪ್ರಸ್ತಾವ ಸಂಪುಟದ ಮುಂದಿತ್ತು. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರಗಳ ಸಾರಿಗೆ ನಿಗಮಗಳ ಪ್ರಯಾಣ ದರಕ್ಕೆ ಹೋಲಿಸಿದಾಗ ನಮ್ಮ ರಾಜ್ಯದ ಪ್ರಯಾಣ ದರ ಕಡಿಮೆ ಇತ್ತು. ದರ ಏರಿಕೆ ಮಾಡಿದ ಬಳಿಕವೂ ನಮ್ಮ ರಾಜ್ಯದ ಪ್ರಯಾಣ ದರ ನೆರೆ ರಾಜ್ಯಗಳಿಗಿಂತ ಕಡಿಮೆಯೇ ಇದೆ ಎಂದೂ ಹೇಳಿದರು.

ಪ್ರಯಾಣದ ದರ ಏರಿಕೆ ಸಾರಿಗೆ ಸಂಸ್ಥೆಯ ಎಲ್ಲ ದರ್ಜೆಯ ಬಸ್ಸುಗಳಿಗೂ ಏಕಪ್ರಕಾರವಾಗಿ ಅನ್ವಯವಾಗಲಿದೆ. ಕಲ್ಯಾಣ ಯೋಜನೆಗಳಿಗೆ ವೆಚ್ಚ ಮಾಡುತ್ತಿರುವ ಮೊತ್ತದ ಹೊರೆಯನ್ನು ಕೆಲವು ವರ್ಗದವರು ಹೊತ್ತುಕೊಳ್ಳಬೇಕಾಗುತ್ತದೆ ಎಂದರು.

ಯಾವಾಗ ಹೆಚ್ಚಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು 2020ರಲ್ಲಿ ಶೇ 12ರಷ್ಟು ಹೆಚ್ಚಳ ಮಾಡಲಾಗಿತ್ತು. ಆಗ ಡೀಸೆಲ್ ದರ ಪ್ರತಿ ಲೀಟರ್‌ಗೆ ₹60.98 ಗಳಾಗಿತ್ತು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರವನ್ನು 2014ರಲ್ಲಿ ಶೇ 17.8ರಷ್ಟು ಹೆಚ್ಚಿಸಲಾಗಿತ್ತು. 2015ರಲ್ಲಿ ಈ ದರವನ್ನು ಶೇ 1.7ರಷ್ಟು ಇಳಿಕೆ ಮಾಡಲಾಗಿತ್ತು. ಆ ವರ್ಷದ ಜನವರಿಯಲ್ಲಿ ಪ್ರತಿ ಲೀಟರ್‌ ಡೀಸೆಲ್‌ ದರ ₹46.24 ಆಗಿತ್ತು.

ಸಾಲಕ್ಕೆ ಖಾತರಿ
ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಭವಿಷ್ಯ ನಿಧಿ ಬಾಕಿ ಮತ್ತು ಇಂಧನ ಬಾಕಿ ಹೊಣೆಗಾರಿಕೆಯನ್ನು ಪಾವತಿಸಲು ₹2,000 ಕೋಟಿ ಸರ್ಕಾರ ಖಾತರಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯಲು ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ ಎಂದು ಸಚಿವ ಎಚ್.ಕೆ. ಪಾಟೀಲ ಅವರು ತಿಳಿಸಿದರು. ಸಾರಿಗೆ ನಿಗಮಗಳು ಹಣಕಾಸು ಸಂಸ್ಥೆಗಳಿಂದ ಪ್ರತ್ಯೇಕವಾಗಿ ಸಾಲವನ್ನು ಪಡೆಯಬಹುದಾಗಿದೆ. ಒಂದು ವೇಳೆ ನಿಗಮಗಳು ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾದರೆ ಸರ್ಕಾರ ನಿಗಮಗಳ ನೆರವಿಗೆ ಬರಲಿದೆ ಎಂದು ಪಾಟೀಲ ವಿವರಿಸಿದರು.

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ

ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯನ್ನು ರಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗಳಿರಲಿವೆ. ಧಾರವಾಡ ಮಹಾನಗರ ಪಾಲಿಕೆ ಆದ ಬಳಿಕ ಅದರ ವ್ಯಾಪ್ತಿಯಲ್ಲಿ 2,75,339 ಜನಸಂಖ್ಯೆ ಇರುತ್ತದೆ. ಒಟ್ಟು ವಿಸ್ತೀರ್ಣ 120.94 ಚ.ಕಿ.ಮೀ ಹಾಗೂ ಜನಸಾಂದ್ರತೆ 2,277 ಇರುತ್ತದೆ. ಹುಬ್ಬಳ್ಳಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಸಂಖ್ಯೆ 6,68,449 ಮತ್ತು ವಿಸ್ತೀರ್ಣ 127.05 ಕಿ.ಮೀ, 5261 ಜನಸಾಂದ್ರತೆ ಇರುತ್ತದೆ ಎಂದು ವಿವರಿಸಿದರು.

ರಕ್ತ ಹೀರುವ ಸರ್ಕಾರ: ಆರ್. ಅಶೋಕ

‘ಸಿದ್ದರಾಮಯ್ಯನವರೇ, ದಿನಬೆಳಗಾದರೆ ಒಂದಲ್ಲ ಒಂದು ಬೆಲೆ ಏರಿಕೆ ಮಾಡಿ ಕನ್ನಡಿಗರ ರಕ್ತ ಹೀರುತ್ತಿದ್ದೀರಲ್ಲ, ನಿಮ್ಮ ಸರ್ಕಾರದ ಬಕಾಸುರ ಹೊಟ್ಟೆ ತುಂಬಿಸಲು ಕನ್ನಡಿಗರು ಇನ್ನೆಷ್ಟು ತೆರಿಗೆ, ಶುಲ್ಕ ತೆರಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್ ಮಾಡಿರುವ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಲೇ ಇದೆ’ ಎಂದು ದೂರಿದ್ದಾರೆ.

ಅಸಮರ್ಥ ಸಿದ್ದರಾಮಯ್ಯನವರ ದುರಾಡಳಿತದಲ್ಲಿ ಪೆಟ್ರೋಲ್– ಡೀಸೆಲ್, ಆಸ್ತಿ ತೆರಿಗೆ, ನೀರು, ಹಾಲು, ಬಸ್ ದರ ಏರಿಕೆ ಅನಿವಾರ್ಯ. ಕನ್ನಡಿಗರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಶೀಘ್ರವೇ ದಂಗೆ ಏಳುವುದೂ ಅನಿವಾರ್ಯ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.