ADVERTISEMENT

ಸಿದ್ದರಾಮಯ್ಯ ಆಟ ಗೊತ್ತಾಗಿ ಆಪರೇಷನ್‌ಗೆ ಬ್ರೇಕ್‌: ಬಿ.ಎಸ್‌. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 31 ಮೇ 2019, 20:30 IST
Last Updated 31 ಮೇ 2019, 20:30 IST
.
.   

ಬೆಂಗಳೂರು: ರಾಜ್ಯದ ‘ಮೈತ್ರಿ’ ಸರ್ಕಾರ ಉಳಿಸಿಕೊಳ್ಳುವತ್ತ ಮೊದಲ ಹೆಜ್ಜೆ ಇಟ್ಟಿರುವ ಜೆಡಿಎಸ್‌–ಕಾಂಗ್ರೆಸ್ ನಾಯಕರು, ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳ ಪೈಕಿ ಎರಡನ್ನು ಪಕ್ಷೇತರ ಶಾಸಕರಿಗೆ ಕೊಟ್ಟು ‘ಬಿಜೆಪಿಯ ಬೀಸೋ ದೊಣ್ಣೆ’ಯಿಂದ ಪಾರಾಗುವ ಯತ್ನ ನಡೆಸಿದ್ದಾರೆ.

ಸಂಪುಟ ವಿಸ್ತರಣೆಯೋ ಪುನರ್‌ ರಚನೆಯೋ ಎಂಬ ಗೊಂದಲಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಬಿಜೆಪಿ ಕಡೆಗೆ ವಾಲಬಹುದಾದ ಅವಕಾಶಗಳಿರುವ ಪಕ್ಷೇತರ ಶಾಸಕರಾದ ಆರ್.ಶಂಕರ್‌(ರಾಣೆ ಬೆನ್ನೂರು), ಎಚ್. ನಾಗೇಶ್(ಮುಳಬಾಗಿಲು) ಅವರನ್ನು ಸಂಪುಟ ಸೇರಿಸಿಕೊಳ್ಳುವ ಸೂತ್ರ ಹೆಣೆದಿದ್ದಾರೆ. ಜೆಡಿಎಸ್‌ ಒಂದು ಪಾಲಿನ ಸಚಿವ ಸ್ಥಾನವನ್ನು ಹಾಗೆಯೇ ಉಳಿಸಿಕೊಳ್ಳುವುದು ನಾಯಕರ ಆಲೋಚನೆ ಎಂದು ಮೂಲಗಳು ಹೇಳಿವೆ.

‘ಆಪರೇಷನ್‌ ಕಮಲ’ ಬಿರುಸುಗೊಂಡು ಪಕ್ಷಾಂತರ ಪರ್ವ ಆರಂಭವಾದರೆ ಅಂತಹ ಸಂಕಷ್ಟ ಕಾಲದಲ್ಲಿ ಖಾಲಿ ಇರುವ ಮತ್ತೊಂದು ಸ್ಥಾನ ತುಂಬುವ ಜತೆಗೆ, ಕೆಲವು ಸಚಿವರನ್ನು ಕೈಬಿಟ್ಟು ಅತೃಪ್ತರಿಗೆ ಅವಕಾಶ ಕಲ್ಪಿಸುವ ಮೂಲಕ ಸರ್ಕಾರ ಉಳಿಸಿಕೊಳ್ಳುವ ಇರಾದೆಯೂ ನಾಯಕರದ್ದಾಗಿದೆ.

ADVERTISEMENT

ದೆಹಲಿಯಲ್ಲಿ ಸೂತ್ರ: ಸಂಪುಟ ವಿಸ್ತರಣೆ–ಪುನರ್‌ರಚನೆ ಕುರಿತು ಮೈತ್ರಿ ನಾಯಕರ ಮಧ್ಯೆ ಹಲವು ಸುತ್ತಿನ ಮಾತುಕತೆ ನಡೆದಿತ್ತು. ಕಾಂಗ್ರೆಸ್‌ ಪ್ರತಿನಿಧಿಸುವ ಸಚಿವರು ತಕ್ಷಣವೇ ಸ್ಥಾನ ತ್ಯಜಿಸಲು ಅಸಮ್ಮತಿ ಸೂಚಿಸಿದ್ದರು. ಇದು ಕಗ್ಗಂಟಾಗಿ ಪರಿಣಮಿಸಿತ್ತು.

ಶುಕ್ರವಾರ ಬೆಳಿಗ್ಗೆಯೇ ಬೆಂಗಳೂರಿನಿಂದ ದೆಹಲಿಗೆ ತೆರಳಿದ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಅಲ್ಲಿಯೇ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜತೆ ಈ ಬಗ್ಗೆ ಚರ್ಚಿಸಿದರು. ‘ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಸಚಿವರ ವಿರೋಧದ ಮಧ್ಯೆ ಪುನರ್‌ರಚನೆಗೆ ಕೈ ಹಾಕುವ ಸಾಹಸ ಮಾಡುವುದು ಬೇಡ. ಅಂತಹ ಅನಿವಾರ್ಯ ಸೃಷ್ಟಿಯಾದರೆ ಆಗ ಮತ್ತೊಮ್ಮೆ ಚರ್ಚಿಸಿ ತೀರ್ಮಾನ ಮಾಡೋಣ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ’ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಮಾತುಕತೆ ನಡೆಸಿದಬಳಿಕ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ ಎಂದು ಮೂಲಗಳು ಹೇಳಿವೆ.

ಸಿದ್ದರಾಮಯ್ಯ ಮೇಲುಗೈ: ‘ಪುನರ್‌ರಚನೆ ಬದಲು ವಿಸ್ತರಣೆಯಷ್ಟೇ ಸಾಕು’ ಎಂದು ಸಿದ್ದರಾಮಯ್ಯ ಹಿಡಿದ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಮನ್ನಣೆ ನೀಡಿದಂತಾಗಿದೆ.

‘ಸಿದ್ದರಾಮಯ್ಯ ಆಟ ಗೊತ್ತಾಗಿ ಆಪರೇಷನ್‌ಗೆ ಬ್ರೇಕ್‌’
‘ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಸಿದ್ದರಾಮಯ್ಯ ಅವರು, 4 ಶಾಸಕರನ್ನು ಬಿಜೆಪಿಗೆ ಕಳುಹಿಸಲು ಮುಂದಾಗಿರುವುದು ನಮ್ಮ ವರಿಷ್ಠರಿಗೆ ಗೊತ್ತಾಗಿದೆ. ಹೀಗಾಗಿ, ಸರ್ಕಾರ ಪತನದ ಯತ್ನಕ್ಕೆ ಕೈ ಹಾಕಬೇಡಿ ಎಂದು ಸೂಚಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ದೆಹಲಿಯಿಂದ ವಾಪಸ್ ಆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೆಲವು ಶಾಸಕರನ್ನು ಮುಂದೆ ಬಿಟ್ಟಿರುವ ಸಿದ್ದರಾಮಯ್ಯ ಅವರು ಮೈತ್ರಿಯಲ್ಲಿ ಅತೃಪ್ತಿ ಇದೆ ಎಂದು ನಾಟಕ ಮಾಡಿಸುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಯತ್ನ ಮಾಡದೇ ವಿರೋಧ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡಿ ಎಂದು ವರಿಷ್ಠರು ನಿರ್ದೇಶನ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.