ADVERTISEMENT

ಕ್ಯಾನ್ಸರ್ ವಂಶವಾಹಿ ರೂಪಾಂತರ ಪತ್ತೆ

‘ಐಬ್ಯಾಬ್’ –ಎಚ್‌ಸಿಜಿ ಸಹಯೋಗದಲ್ಲಿ ಸಂಶೋಧನೆ: ಚಿಕಿತ್ಸೆಗೆ ಪೂರಕ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 19:51 IST
Last Updated 4 ಫೆಬ್ರುವರಿ 2022, 19:51 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಬಾಯಿ ಕ್ಯಾನ್ಸರ್‌ಗೆ ಕಾರಣವಾಗುವ 114 ವಂಶವಾಹಿ ರೂಪಾಂತರಗಳನ್ನು ತಜ್ಞರು ಪತ್ತೆ ಮಾಡಿದ್ದು, ಇದರಿಂದಾಗಿ ನಿರ್ದಿಷ್ಟ ಜೀವಕೋಶ ಕೇಂದ್ರಿತ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ.

ಎಚ್‌ಸಿಜಿ ತಜ್ಞ ವೈದ್ಯರ ಸಹಯೋಗದಲ್ಲಿ ಸರ್ಕಾರದ ‘ಐಬ್ಯಾಬ್’ (ಇನ್‌ಸ್ಟಿಟ್ಯೂಟ್‌ ಆಫ್‌ ಬಯೊಇನ್‌ಫಾರ್ಮಾಟಿಕ್ಸ್‌ ಆಂಡ್‌ ಅಪ್ಲೈಡ್‌ ಬಯೊಟೆಕ್ನಾಲಜಿ–ಐಬಿಎಬಿ) ಸಂಸ್ಥೆಯು ಈ ಮಹತ್ವದ ಸಂಶೋಧನೆ ಕೈಗೊಂಡು ರೂಪಾಂತರಗಳನ್ನು ಪತ್ತೆ ಮಾಡಿದೆ.

ಕ್ಯಾನ್ಸರ್‌ನಿಂದ ಬದುಕುಳಿಯುವ ಸಾಧ್ಯತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಮುಖ ವಂಶವಾಹಿಗಳನ್ನು ಸಹ ಈ ಸಂಶೋಧನೆಯಲ್ಲಿ ಗುರುತಿಸಲಾಗಿದೆ.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ವಿವರ ನೀಡಿದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ‘ವಂಶವಾಹಿ ಅನುಕ್ರಮಣಿಕೆ ವಿಶ್ಲೇಷಣೆ ಆಧಾರಿತವಾಗಿ ನಡೆದಿರುವ ಈ ಸಂಶೋಧನೆಯು ಬಾಯಿ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಪಟ್ಟಂತೆ ಹೊಸ ಆಶಾಕಿರಣ ಮೂಡಿಸಿದ್ದು, ಜನರ ಜೀವ ಉಳಿಸಲು ಸಹಕಾರಿಯಾಗಲಿದೆ’ ಎಂದರು.

‘ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಸ್ಥಾಪಿತವಾಗಿರುವ ಐಬ್ಯಾಬ್ ಸಂಸ್ಥೆಯು, ಅತ್ಯಾಧುನಿಕ ಜಿನೊಮಿಕ್ಸ್ ವ್ಯವಸ್ಥೆ ಬಳಸಿ ನಡೆಸಿದ ಸಂಶೋಧನೆ ಇದಾಗಿದೆ. ಜತೆಗೆ, ಸುಧಾರಿತ ಮೆಷಿನ್ ಲರ್ನಿಂಗ್ ಮತ್ತು ಬಯೊಇನ್‌ಫಾರ್ಮ್ಯಾಟಿಕ್ಸ್‌ ಉಪಯೋಗಿಸಿಕೊಂಡು ಈ ಅಧ್ಯಯನ ನಡೆಸಲಾಗಿದೆ’ ಎಂದು ಸಚಿವರು ವಿವರಿಸಿದರು.

‘ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 40ರಷ್ಟು ಬಾಯಿ ಕ್ಯಾನ್ಸರ್‌ ರೋಗಿಗಳಿದ್ದಾರೆ. ಭಾರತದ ರೋಗಿಗಳನ್ನೇ ಆಯ್ಕೆ ಮಾಡಿಕೊಂಡು ನಡೆಸಲಾಗಿರುವ ಮೊತ್ತಮೊದಲ ವಿಸ್ತೃತ ಅಧ್ಯಯನ ಇದಾಗಿದೆ. ಈ ಅಧ್ಯಯನದ ದತ್ತಾಂಶಗಳನ್ನು ಪಾಶ್ಚಿಮಾತ್ಯ ವಂಶವಾಹಿ ಅಧ್ಯಯನಗಳ ಜತೆಗೂ ಹೋಲಿಕೆ ಮಾಡಿ ವಿಶ್ಲೇಷಿಸಲಾಗಿದೆ’ ಎಂದು ಅವರು ವಿವರಿಸಿದರು.

‘ಬಾಯಿ ಕ್ಯಾನ್ಸರ್‌ಗೆ ಕಾರಣವಾಗುವ 114 ವಂಶವಾಹಿ ರೂಪಾಂತರಗಳ ಪೈಕಿ 35 ರೂಪಾಂತರಗಳು ಆಂಕೋಜೀನ್‌ಗಳಾದರೆ, 11 ಟ್ಯೂಮರ್ ಸಪ್ರೆಸರ್‌ಗಳಾಗಿದ್ದು, 2 ಡಿಎನ್ಎ ದುರಸ್ತಿ ವಂಶವಾಹಿಗಳಾಗಿವೆ ಎಂಬುದನ್ನು ಗುರುತಿಸಲಾಗಿದೆ’ ಎಂದರು. ‘ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಈ ಸಂಶೋಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕೆಗಳಲ್ಲಿ ಈ ಕುರಿತು ಅಧ್ಯಯನ ವರದಿ ಪ್ರಕಟಗೊಂಡಿದೆ’ ಎಂದು ತಿಳಿಸಿದರು.

ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದ ಡೀನ್ ಡಾ.ವಿಶಾಲ್ ರಾವ್, ‘ರಾಜ್ಯ ಸರ್ಕಾರವು ಚಿಕಿತ್ಸಕರು ಹಾಗೂ ಸಂಶೋಧಕರು ಒಂದೆಡೆ ಸೇರಿ ಅಧ್ಯಯನದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ್ದರಿಂದ ಸಂಶೋಧನೆ ಸಾಧ್ಯವಾಗಿದೆ’ ಎಂದರು.

‘ಇದುವರೆಗೆ ಬಾಯಿ ಕ್ಯಾನ್ಸರ್‌ಗೆ ಉತ್ತಮ ಚಿಕಿತ್ಸೆ ನೀಡಿದರೂ ಶೇ 50ರಷ್ಟು ಪ್ರಕರಣಗಳಲ್ಲಿ ರೋಗ ಮರುಕಳಿಸುತ್ತಿತ್ತು. ಆದರೆ, ಈ ಸಂಶೋಧನೆಯು ರೋಗ ಮರುಕಳಿಸದಂತೆ ಚಿಕಿತ್ಸೆ ನೀಡಲು ಸಹಕಾರಿ
ಯಾಗಲಿದೆ’ ಎಂದು ಐಬ್ಯಾಬ್‌ ಪ್ರಾಧ್ಯಾಪಕರಾದ ವಿಭಾ ಚೌಧರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.