ADVERTISEMENT

ಯುವತಿಯರ ರಂಪಾಟ: ಇನ್‌ಸ್ಪೆಕ್ಟರ್ ಮೇಲೆಯೇ ಕಾರು ಹತ್ತಿಸಲು ಯತ್ನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 10:34 IST
Last Updated 19 ಏಪ್ರಿಲ್ 2020, 10:34 IST
ಬೆಂಗಳೂರಿನಲ್ಲಿ ಯುವತಿಯರ ರಂಪಾಟ
ಬೆಂಗಳೂರಿನಲ್ಲಿ ಯುವತಿಯರ ರಂಪಾಟ    

ಬೆಂಗಳೂರು:ಅಪಾಯಕಾರಿ ಚಾಲನೆ ಮಾಡಿಕೊಂಡು ಬಂದಿದ್ದನ್ನು ಪ್ರಶ್ನಿಸಿದ್ದ ಇನ್‌ಸ್ಪೆಕ್ಟರ್ ಮೇಲೆಯೇ ಕಾರು ಹತ್ತಿಸಲು ಯತ್ನಿಸಿ ಯುವತಿಯರು ಪರಾರಿಯಾಗಿರುವ ಘಟನೆ ಬಳ್ಳಾರಿ ರಸ್ತೆಯಲ್ಲಿ ನಡೆದಿದೆ‌.

ಲೀನಾ ಪ್ಯಾಲೇಸ್ ಬಳಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ ಯುವತಿಯರಿಬ್ಬರು ಕಾರಿನಲ್ಲಿ ಬಂದಿದ್ದರು. ಕಾರನ್ನು ಅಪಾಯಕಾರಿಯಾಗಿ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದರು. ದೂರದಿಂದಲೇ ಕಾರು ನೋಡಿದ್ದ ಪೊಲೀಸರು, ಅದನ್ನು ತಡೆದಿದ್ದರು.

ಪೊಲೀಸರ ಜೊತೆಯೇ ವಾಗ್ವಾದ ನಡೆಸಿದ್ದ ಯುವತಿ, ನಾವು ಯಾರು ಗೊತ್ತಾ? ಅಂತಾ ಬೆದರಿಕೆ ಹಾಕಿದ್ದರು. ಹೊಯ್ಸಳ ವಾಹನವನ್ನು ಸ್ಥಳಕ್ಕೆ ಕರೆಸಿದ್ದ ಪೊಲೀಸರು, ಯುವತಿಯರನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು.ಕಾರಿನಲ್ಲಿ ಠಾಣೆಗೆ ಬರುವುದಾಗಿ ಹೇಳಿ ಕಾರು ಹತ್ತಿದ್ದ ಯುವತಿಯರು, ಎದುರು ನಿಂತಿದ್ದ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಮೇಲೆಯೇ ಕಾರು ಹತ್ತಿಸಲು ಯತ್ನಿಸಿ ಪರಾರಿಯಾಗಿದ್ದಾರೆ. ಬೆನ್ನಟ್ಟಿದರೂ ಅವರ ಸುಳಿವು ಸಿಕ್ಕಿಲ್ಲ.

ADVERTISEMENT

'ಯುವತಿಯರು ಮದ್ಯದ ಅಮಲಿನಲ್ಲಿದ್ದ ಬಗ್ಗೆ ಅನುಮಾನವಿತ್ತು. ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವ ಮುನ್ನವೇ ಅವರು ಪರಾರಿಯಾದರು' ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.