ADVERTISEMENT

Census | ಕೇಂದ್ರದ ಜನಗಣತಿಗೆ ‘ರಾಜ್ಯದ ಆ್ಯಪ್’?

ಸಮೀಕ್ಷೆ ಬಗ್ಗೆ ಮಾಹಿತಿ ಕೇಳಿದ ಕೇಂದ್ರ ಸಚಿವಾಲಯ

ರಾಜೇಶ್ ರೈ ಚಟ್ಲ
Published 12 ಮೇ 2025, 0:30 IST
Last Updated 12 ಮೇ 2025, 0:30 IST
   

ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇಡೀ ದೇಶದಲ್ಲಿ ಮೊದಲ ಬಾರಿಗೆ ಮೊಬೈಲ್‌ ಆ್ಯಪ್ ಬಳಸಿ ಪರಿಶಿಷ್ಟ ಜಾತಿಯ ಕುಟುಂಬಗಳ ದತ್ತಾಂಶ ಸಂಗ್ರಹಿಸುತ್ತಿದೆ. ಈ ಸಮೀಕ್ಷೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮುಂದಿನ ದಶಕದ ಜನಗಣತಿಯ ಜೊತೆಗೆ ಜಾತಿ ಗಣತಿಯನ್ನೂ ನಡೆಸಲು ತೀರ್ಮಾನಿಸಿದೆ. ರಾಜ್ಯ ಸರ್ಕಾರ ಮೊಬೈಲ್‌ ಆ್ಯಪ್‌ ಬಳಸಿ ಪರಿಶಿಷ್ಟ ಜಾತಿಯ ಕುಟುಂಬಗಳ ದತ್ತಾಂಶ ಸಂಗ್ರಹಿಸುವುದನ್ನೇ ಕೇಂದ್ರ ಸರ್ಕಾರ ತಾನು ನಡೆಸುವ ಗಣತಿಗೂ ಮಾದರಿಯಾಗಿ ಅನುಸರಿಸಲು ಮುಂದಾಗಿದೆ.

ಮೊಬೈಲ್‌ ಆ್ಯಪ್‌ ಸಮೀಕ್ಷೆ ಕುರಿತಂತೆ ಮಾಹಿತಿ ಕೇಳಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕಾರ್ಯದರ್ಶಿ ಮೇ 8ರಂದು ಪತ್ರ ಬರೆದಿದ್ದರು. ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಎಂಟು ಪುಟಗಳ ಪತ್ರದಲ್ಲಿ ಸಮಗ್ರ ಮಾಹಿತಿ ನೀಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ADVERTISEMENT

ರಾಜ್ಯದಲ್ಲಿ ಒಳ ಮೀಸಲಾತಿ ಸಮೀಕ್ಷೆಯನ್ನು ಯಾವ ರೀತಿ ನಡೆಸಲಾಗುತ್ತಿದೆ, ಪ್ರಕ್ರಿಯೆಯ ಈವರೆಗಿನ ಪ್ರಗತಿ, ಮೊಬೈಲ್‌ ತಂತ್ರಾಂಶದ ಅಭಿವೃದ್ಧಿ ಸೇರಿದಂತೆ ವಿವರವಾದ ಮಾಹಿತಿಯನ್ನು ಕೇಂದ್ರ ಸರ್ಕಾರ ಕೇಳಿದೆ. ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಆಯೋಗ ಸರ್ಕಾರಕ್ಕೆ ಸಲ್ಲಿಸಿದ್ದ ಶಿಫಾರಸು, ಅದರ ಆಧಾರದಲ್ಲಿ ಸಮೀಕ್ಷೆ ನಡೆಸಲು ಮೊಬೈಲ್‌ ತಂತ್ರಾಂಶದ ವಿನ್ಯಾಸ ಸೇರಿದಂತೆ ಈವರೆಗೆ ಏನೇನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಗಣತಿದಾರರು ಎಷ್ಟು? ಪ್ರಶ್ನಾವಳಿಗಳೇನು ಮತ್ತಿತರ ಎಲ್ಲ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿದೆ ಎಂದೂ ಮೂಲಗಳು ಹೇಳಿವೆ.

ಖಾಸಗಿ ಸಂಸ್ಥೆಗಳು ಮೊಬೈಲ್‌ ಆ್ಯಪ್‌ಗಳ ಮೂಲಕ ಈಗಾಗಲೇ ಹಲವು ಮಾದರಿಯ ಸಮೀಕ್ಷೆಗಳನ್ನು ಮಾಡಿದ್ದರೂ, ಸರ್ಕಾರಿ ವ್ಯವಸ್ಥೆಯಲ್ಲಿ ಮೊಬೈಲ್‌ ಆ್ಯಪ್‌ ಬಳಸಿ ಕುಟುಂಬಗಳ ದತ್ತಾಂಶ ಸಂಗ್ರಹಿಸುತ್ತಿರುವುದು ಕರ್ನಾಟಕದಲ್ಲಿಯೇ ಮೊದಲು. ಈ ಸಿದ್ಧ ವ್ಯವಸ್ಥೆಯನ್ನೇ ಮಾದರಿಯಾಗಿ ಇಟ್ಟುಕೊಂಡು ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಜನಗಣತಿ ನಡೆಸುವ ಸಾಧ್ಯತೆಯಿದೆ ಎಂದೂ ಮೂಲಗಳು ತಿಳಿಸಿವೆ.

10.04 ಲಕ್ಷ ಕುಟುಂಬಗಳ ಸಮೀಕ್ಷೆ:

ರಾಜ್ಯದಲ್ಲಿ ಮೇ 5ರಿಂದ ಪರಿಶಿಷ್ಟ ಜಾತಿಯ ಕುಟುಂಬಗಳ ದತ್ತಾಂಶ ಸಂಗ್ರಹ ನಡೆಯುತ್ತಿದೆ. ಗಣತಿದಾರರು ಈವರೆಗೆ ಪರಿಶಿಷ್ಟ ಜಾತಿಯ 10.04 ಲಕ್ಷ ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಅಲ್ಲದೆ, ಪರಿಶಿಷ್ಟ ಜಾತಿಯೇತರ 67.77 ಲಕ್ಷ ಮನೆಗಳಿಗೆ ಭೇಟಿ ನೀಡಿದ್ದಾರೆ. ಈ ಮನೆ ಮನೆ ಸಮೀಕ್ಷೆಯು ಇದೇ 17ರವರೆಗೆ ನಡೆಯಲಿದೆ.

ಮತಗಟ್ಟೆ ಮಟ್ಟದಲ್ಲಿ ಮತದಾರರ ಪಟ್ಟಿಯ ಆಧಾರದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಪರಿಶಿಷ್ಟ ಜಾತಿಯವರ ಯಾವುದೇ ಮನೆ ಸಮೀಕ್ಷೆಯಿಂದ ಹೊರಗೆ ಉಳಿಯಬಾರದೆಂಬ ಕಾರಣಕ್ಕೆ ಪ್ರತಿ ಮನೆಗಳಿಗೂ ಗಣತಿದಾರರು ಭೇಟಿ ನೀಡುತ್ತಿದ್ದಾರೆ. ಪರಿಶಿಷ್ಟ ಜಾತಿಯವರ ಮನೆಯಿಂದ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಪರಿಶಿಷ್ಟ ಜಾತಿಯೇತರರ ಮನೆಯಾಗಿದ್ದರೆ, ಆ ಮನೆಯಲ್ಲಿರುವ ಒಟ್ಟು ಜನರ ಸಂಖ್ಯೆಯನ್ನು ಮಾತ್ರ ಮೊಬೈಲ್‌ ಆ್ಯಪ್‌ನಲ್ಲಿ ನಮೂದಿಸುತ್ತಾರೆ. ಇದರಿಂದ ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯೂ ಲಭ್ಯವಾಗಲಿದೆ.

ಎಚ್‌. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (ಜಾತಿ ಜನಗಣತಿ) ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 23 ಲಕ್ಷ ಮನೆಗಳನ್ನು ಗುರುತಿಸಲಾಗಿತ್ತು. ಈಗ ಪರಿಶಿಷ್ಟ ಜಾತಿಯವರ ಕುಟುಂಬಗಳ ಸಂಖ್ಯೆ‌ 25 ಲಕ್ಷಕ್ಕೆ ಹೆಚ್ಚಳ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಸಮೀಕ್ಷೆಗಾಗಿ ಎಲ್ಲ ಗಣತಿದಾರರು ಏಕಕಾಲಕ್ಕೆ ಮೊಬೈಲ್‌ ಆ್ಯಪ್‌ನಲ್ಲಿ ಲಾಗ್‌ ಇನ್‌ ಮಾಡುವುದರಿಂದ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿವೆ. ಅಲ್ಲದೆ, ಆಧಾರ್‌ ಮತ್ತು ಪಡಿತರ ಚೀಟಿಯ ಅಧಿಕೃತತೆಯನ್ನು ವೆಬ್‌ಸೈಟ್‌ನಿಂದ ದೃಢೀಕರಿಸಿಕೊಳ್ಳಬೇಕಿದೆ. ಈ ಸಂದರ್ಭದಲ್ಲಿಯೂ ತಾಂತ್ರಿಕ ದೋಷಗಳು ಕಂಡುಬಂದಿವೆ. ಸದ್ಯ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದು ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ್‌ದಾಸ್‌ ಆಯೋಗದ ಮೂಲಗಳು ತಿಳಿಸಿವೆ.

ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ದಾಖಲಿಸಲು ಪ್ರತ್ಯೇಕ ವೆಬ್‌ಸೈಟ್‌ ರೂಪಿಸಲಾಗುತ್ತಿದೆ. ಈ ವೆಬ್‌ಸೈಟ್‌ನಲ್ಲಿ ತಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿದಾಗ ಬರುವ ಒಟಿಪಿ ದಾಖಲಿಸಿ, ಪ್ರತಿಯೊಬ್ಬರೂ ಸಮೀಕ್ಷೆಯ ವೇಳೆ ನೀಡಿದ್ದ ತಮ್ಮ ಮಾಹಿತಿಯನ್ನು ವೈಯಕ್ತಿಕವಾಗಿ ಪರಿಶೀಲಿಸಬಹುದು. ಆಕ್ಷೇಪಗಳಿದ್ದರೆ ಸರಿಪಡಿಸಲು ಅರ್ಜಿ ಕೊಡಬಹುದು. ಆ ಮೂಲಕ ತಿದ್ದುಪಡಿಗೂ ಅವಕಾಶವಿದೆ. ಎರಡನೇ ಹಂತದ ಸಮೀಕ್ಷೆಯು ಮೇ 19ರಿಂದ 21ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳನ್ನು ಏರ್ಪಡಿಸಿ ನಡೆಯಲಿದೆ.‌ ಆನ್‌ಲೈನ್‌ ಮೂಲಕ ಸ್ವಯಂ ಘೋಷಣೆಗೆ ಮೇ 19ರಿಂದ 23ರವರೆಗೆ ಅವಕಾಶ ಸಿಗಲಿದೆ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.