ಸಿದ್ದರಾಮಯ್ಯ
ಚಿಕ್ಕಬಳ್ಳಾಪುರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಮರು ಗಣತಿ ನಡೆಸುವುದು ನನ್ನ ತೀರ್ಮಾನವಲ್ಲ. ಅದು ಪಕ್ಷದ ಹೈಕಮಾಂಡ್ ನಿರ್ಧಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೌರಿಬಿದನೂರು ತಾಲ್ಲೂಕಿನ ಅಲಕಪುರ ಹೆಲಿಪ್ಯಾಡ್ ನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜಾತಿ ಗಣತಿ ನಡೆದಿದ್ದು 2015ರಲ್ಲಿ. ಈಗ 10 ವರ್ಷಗಳಾಗಿವೆ. ಆದ್ದರಿಂದ ಮರು ಸಮೀಕ್ಷೆ ನಡೆಸುವಂತೆ ನಿರ್ದೇಶನ ನೀಡಿದೆ ಎಂದು ಹೇಳಿದರು.
ಕಾಂತರಾಜು ವರದಿ ಸರ್ಕಾರಕ್ಕೆ ಸಲ್ಲಿಕೆ ಆಗಿದ್ದು ವರದಿಯನ್ನು ಪೂರ್ಣವಾಗಿ ಕಡೆಗಣಿಸಿಲ್ಲ. ಕೆಲವು ಬದಲಾವಣೆಗಳೊಂದಿಗೆ 60ರಿಂದ 70 ದಿನಗಳಲ್ಲಿ ಮರು ಸಮೀಕ್ಷೆ ನಡೆಸಲಾಗುತ್ತದೆ ಎಂದರು.
ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಇ.ಡಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಕಾನೂನಿನ ಅನುಷ್ಠಾನಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ಆದರೆ ಬಿಜೆಪಿ ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಗೋದ್ರಾ ಘಟನೆಯಲ್ಲಿ ಎಷ್ಟು ಜನರು ಸತ್ತರು? ಚಾಮರಾಜನಗರದಲ್ಲಿ ಕೋವಿಡ್ ವೇಳೆ ಆಮ್ಲಜನಕ ದೊರೆಯದೆ ಮೃತಪಟ್ಟರು. ಆಗ ಮುಖ್ಯಮಂತ್ರಿ ಆಗಿದ್ದು ಯಾರು? ಅವರು ರಾಜೀನಾಮೆ ನೀಡಿದರೆ ಎಂದು ಪ್ರಶ್ನಿಸಿದರು. ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತ ಪ್ರಕರಣವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಬಡತನ ನಿರ್ಮೂಲನೆಗೆ ಗರೀಬಿ ಹಠಾವೊ ಕಾರ್ಯಕ್ರಮ ರೂಪಿಸಿದೆ. ಆದ್ದರಿಂದ ಬಡತನ ನಿರ್ಮೂಲನೆ ಆಗಿದೆ. ನರೇಂದ್ರ ಮೋದಿ ಮತ್ತು ಬಿಜೆಪಿ ಬಡತನ ನಿರ್ಮೂಲನೆಗೆ ಏನು ಕ್ರಮವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.