ADVERTISEMENT

ಜಾತಿ ತಾರತಮ್ಯ: ಗೂಳಿಹಟ್ಟಿ ಶೇಖರ್ ಆರೋಪದ ಬಗ್ಗೆ ಆರ್‌ಎಸ್‌ಎಸ್‌ ಸ್ಪಷ್ಟನೆ

ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಅವರಿಂದ ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2023, 11:24 IST
Last Updated 6 ಡಿಸೆಂಬರ್ 2023, 11:24 IST
<div class="paragraphs"><p>ಗೂಳಿಹಟ್ಟಿ ಶೇಖರ್, ಬಲ ಚಿತ್ರದಲ್ಲಿ</p></div>

ಗೂಳಿಹಟ್ಟಿ ಶೇಖರ್, ಬಲ ಚಿತ್ರದಲ್ಲಿ

   

ಬೆಂಗಳೂರು: ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಆರ್‌ಎಸ್‌ಎಸ್ ಕಚೇರಿ ಬಗ್ಗೆ ಆಡಿಯೊ ಹೇಳಿಕೆಯಲ್ಲಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಅವರು ಬೆಂಗಳೂರು ಕಚೇರಿಯಿಂದ ಬುಧವಾರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ADVERTISEMENT

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಚೇರಿ ಹಾಗೂ ಸ್ಮಾರಕದ ಕಟ್ಟಡಗಳಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ತಿಳಿಸಿದ್ದಾರೆ.

ನಾಗ್ಪುರದ ಆರ್‌ಎಸ್‌ಎಸ್ ಕಚೇರಿ ಭೇಟಿಯ ಸಂದರ್ಭದಲ್ಲಿ ಉಂಟಾದ ಕಹಿ ಅನುಭವಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ಆಡಿಯೊ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳೊಂದಿಗೆ ‌ಹಂಚಿಕೊಂಡಿದ್ದ ಗೂಳಿಹಟ್ಟಿ ಶೇಖರ್, ಜಾತಿ ಕಾರಣಕ್ಕೆ ಹೆಡಗೇವಾರ್‌ ವಸ್ತುಸಂಗ್ರಹಾಲಯದ ಪ್ರವೇಶ ನಿರಾಕರಿಸಲಾಗಿತ್ತು ಎಂದು ಆರೋಪಿಸಿದ್ದರು.

‘ನಾಗ್ಪುರದಲ್ಲಿ ಸಂಘದ ಕಾರ್ಯಾಲಯವನ್ನು ನೋಡಲು ಬಂದವರ ಹೆಸರನ್ನು ನೋಂದಾಯಿಸಿ, ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ. ಇದೊಂದು ನಿರಾಧಾರ ಹಾಗೂ ಹುರುಳಿಲ್ಲದ ಆರೋಪ. ಆರ್‌ಎಸ್‌ಎಸ್ ಕಚೇರಿ, ಸ್ಮಾರಕ ಕಟ್ಟಡಗಳಿಗೆ ಎಲ್ಲ ಜಾತಿ, ವರ್ಗದ ಸಾವಿರಾರು ಜನ ನಿತ್ಯ ಬಂದು ಹೋಗುತ್ತಲೇ ಇದ್ದಾರೆ. ಯಾರಿಗೂ ಪ್ರವೇಶ ನಿರಾಕರಣೆಯ ಪ್ರಶ್ನೆಯೇ ಬಂದಿಲ್ಲ’ ಎಂದು ತಿಪ್ಪೇಸ್ವಾಮಿ ಹೇಳಿದ್ದಾರೆ. 

‘ರಾಜ್ಯ ವಿಧಾನಸಭೆ ಚುನಾವಣೆಗೆ 4 ತಿಂಗಳ ಮೊದಲು ಈ ಘಟನೆ ನಡೆದಿತ್ತು ಎನ್ನುವ ಗೂಳಿಹಟ್ಟಿ ಶೇಖರ್ ಅವರು, ಆ ನಂತರ ಸಂಘದ ಅನೇಕ ಪ್ರಮುಖರನ್ನು ಭೇಟಿಯಾದರೂ ಎಲ್ಲಿಯೂ ತಮಗಾದ ಈ ಅವಮಾನದ ಬಗ್ಗೆ ಹೇಳಿರಲಿಲ್ಲ. ಹತ್ತು ತಿಂಗಳ ನಂತರ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯಕರ. ಆರ್‌ಎಸ್‌ಎಸ್ ಎಲ್ಲರನ್ನೂ ಸದಾ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ’ ಎಂದು ತಿಪ್ಪೇಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.