ADVERTISEMENT

ಕಿಮ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಜಾತಿ ತಾರತಮ್ಯ ಆರೋಪ

‘ಪರಿಶಿಷ್ಟರಿಗೆ ಚಿಕಿತ್ಸೆ ಕೊಡುವ ಅರ್ಹತೆ ಇಲ್ಲ’

ಮನೋಜ ಕುಮಾರ್ ಗುದ್ದಿ
Published 20 ಡಿಸೆಂಬರ್ 2018, 20:46 IST
Last Updated 20 ಡಿಸೆಂಬರ್ 2018, 20:46 IST
ಕಿಮ್ಸ್‌ ಆಡಳಿತ ಕಚೇರಿ ಕಟ್ಟಡ
ಕಿಮ್ಸ್‌ ಆಡಳಿತ ಕಚೇರಿ ಕಟ್ಟಡ   

ಹುಬ್ಬಳ್ಳಿ: ‘ಎಸ್ಸಿ ಸಮುದಾಯಕ್ಕೆ ಸೇರಿದ ನಿಮಗೆ ಚಿಕಿತ್ಸೆ ನೀಡುವ ಅರ್ಹತೆ ಇಲ್ಲ. ಮೀಸಲಾತಿಯ ಕಾರಣಕ್ಕಾಗಿ ನಿಮಗೆ ಸುಲಭವಾಗಿ ಮೆಡಿಕಲ್‌ ಸೀಟು ಸಿಗುತ್ತದೆ, ಇಲ್ಲಿಗೆ ಬಂದು ಬಿಡುತ್ತೀರಿ...’

ಇದು ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಕಿಮ್ಸ್‌) ಎಂಬಿಬಿಎಸ್‌ ಹಾಗೂ ಎಂ.ಎಸ್‌. ಅಧ್ಯಯನ ಮಾಡಲು ಬಂದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೇಲ್ಜಾತಿಯ ಪ್ರಾಧ್ಯಾಪಕರು ನಿಂದಿಸಿದ ಪರಿ!

ಹೀಗೆ ನಿಂದಿಸಿದ ಆರೋಪ ಎದುರಿಸುತ್ತಿರುವ ಕಿಮ್ಸ್‌ನ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಗುರುಶಾಂತಪ್ಪ ಯಲಗಚ್ಚಿನ, ಮೆಡಿಸಿನ್‌ ವಿಭಾಗದ ಮುಖ್ಯಸ್ಥ ಡಾ.ಈಶ್ವರ ಹಸಬಿ, ಔಷಧ ವಿಜ್ಞಾನ ವಿಭಾಗದ ಪ್ರಾಧ್ಯಾಪ‍ಕ ಡಾ.ದತ್ತಾತ್ರೇಯ ಅವರಿಗೆ ನೋಟಿಸ್‌ ನೀಡಲಾಗಿದೆ.

ADVERTISEMENT

‘ಜಾತಿ ನಿಂದನೆ ಮಾಡಿದ ಪ್ರಾಧ್ಯಾಪಕರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾಧಿಕಾರಿ ದೀಪಾ ಚೋಳನ್‌, ಕಿಮ್ಸ್‌ ನಿರ್ದೇಶಕ ಡಾ.ಡಿ.ಡಿ. ಬಂಟ್‌ ಅವರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಬಂಟ್‌, ಮೂವರಿಗೂ ನೋಟಿಸ್‌ ಜಾರಿ ಮಾಡಿದ್ದಾರೆ. ಪೊಲೀಸರೂ ವಿದ್ಯಾರ್ಥಿಗಳಿಂದ ಹೇಳಿಕೆ ಪಡೆದುಕೊಂಡಿದ್ದಾರೆ.

ಏನೇನು ಕಿರುಕುಳ?:‘ಮೇಲ್ಜಾತಿಯ ವಿದ್ಯಾರ್ಥಿಗಳಿಗೆ ಸಾಕಷ್ಟು ಸೆಮಿನಾರುಗಳಿಗೆ ಹೋಗಲು ಅವಕಾಶ ನೀಡಲಾಗುತ್ತದೆ. ಆದರೆ, ನಮಗೆ ಬೇಕೆಂತಲೇ ನಿರಾಕರಿಸಲಾಗುತ್ತದೆ. ಮೇಲ್ಜಾತಿ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿಯೇ ಉಳಿಸಿ ನಮಗೆ ವಿಐಪಿ ಡ್ಯೂಟಿಗೆ (ಗಣ್ಯರು ನಗರಕ್ಕೆ ಬಂದಾಗ ಅವರ ಜೊತೆ ಇರುವುದು) ನಿಯೋಜಿಸುತ್ತಾರೆ. ಪರೀಕ್ಷೆಯಲ್ಲಿ ಬೇಕೆಂತಲೇ ಫೇಲ್‌ ಮಾಡುತ್ತಾರೆ.’ ಎಂದು ಸ್ನಾತಕೋತ್ತರ ಪದವಿಮಾಡಲು ಹಳೇ ಮೈಸೂರು ಭಾಗದಿಂದ ಇಲ್ಲಿಗೆ ಬಂದಿರುವ ವಿದ್ಯಾರ್ಥಿಯೊಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಎಂಬಿಬಿಎಸ್‌ಗಾಗಿ ನಡೆದ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್‌ ಪಡೆದ ಪರಿಶಿಷ್ಟ ವಿದ್ಯಾರ್ಥಿಯೊಬ್ಬರನ್ನು ಹೀಗೆಯೇ ಈ ಹಿಂದೆ ಫೇಲ್‌ ಮಾಡಲಾಯಿತು. ಸದ್ಯ ಅವರು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಸರ್ಜನ್‌ ಆಗಿದ್ದಾರೆ ಎಂದರು.

**

‘ನಾನು ದಲಿತ ವಿರೋಧಿಯಲ್ಲ’

‘ನಾನು ದಲಿತ ಸಮುದಾಯದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರನ್ನು ನಿಂದಿಸಿಲ್ಲ. ಈ ಬಗ್ಗೆ ಬಂದ ನೋಟಿಸ್‌ಗೆ ಉತ್ತರವನ್ನೂ ಬರೆದು ಕಳಿಸಿದ್ದೇನೆ’ ಎಂದು ಡಾ. ಗುರುಶಾಂತಪ್ಪ ಪ್ರತಿಕ್ರಿಯೆ ನೀಡಿದರು.

**

ಆರೋಪ ಬಂದ ತಕ್ಷಣ ಮೂವರೂ ಪ್ರಾಧ್ಯಾಪಕರಿಗೆ ನೋಟಿಸ್‌ ಕೊಟ್ಟು ಪ್ರತಿಕ್ರಿಯೆ ಪಡೆದುಕೊಂಡಿದ್ದೇವೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಲಾಗಿದೆ.

-ಡಾ. ಡಿ.ಡಿ. ಬಂಟ್‌, ಕಿಮ್ಸ್‌ ನಿರ್ದೇಶಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.