ADVERTISEMENT

ಜಾತಿವಾರು ಸಮೀಕ್ಷೆ: ಮೊದಲ ದಿನ 10,642 ಮಂದಿಯ ದತ್ತಾಂಶ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 0:30 IST
Last Updated 23 ಸೆಪ್ಟೆಂಬರ್ 2025, 0:30 IST
<div class="paragraphs"><p>ಜಾತಿ ಗಣತಿ</p></div>

ಜಾತಿ ಗಣತಿ

   

ಬೆಂಗಳೂರು: ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಸಮೀಕ್ಷೆ) ಸೋಮವಾರ ಆರಂಭವಾಗಿದ್ದು, ಮೊದಲ ದಿನ ಕೇವಲ 10,642 ಮಂದಿಯ ದತ್ತಾಂಶ ಸಂಗ್ರಹಿಸಲಾಗಿದೆ.

ಮಧ್ಯಾಹ್ನ 2 ಗಂಟೆವರೆಗೆ ಕೇವಲ 400 ಕುಟುಂಬಗಳ ಸಮೀಕ್ಷೆಯಷ್ಟೇ ನಡೆದಿತ್ತು. ದಿನದ ಅಂತ್ಯಕ್ಕೆ 2,765 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿತು. ಮೊದಲ ದಿನ ಹಾವೇರಿ ಜಿಲ್ಲೆಯಲ್ಲಿ 680 ಕುಟುಂಬಗಳ ದತ್ತಾಂಶ ಸಂಗ್ರಹಿಸಲಾಗಿದೆ.

ADVERTISEMENT

15 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆದ ಕುಟುಂಬಗಳ ಸಂಖ್ಯೆ 10ಕ್ಕಿಂತಲೂ ಕಡಿಮೆ. ವಿಜಯಪುರ, ಉತ್ತರ ಕನ್ನಡ, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ತಲಾ ಏಳು, ಕೊಪ್ಪಳ, ಬೀದರ್‌ನಲ್ಲಿ ತಲಾ ಆರು, ಬಳ್ಳಾರಿ, ಧಾರವಾಡದಲ್ಲಿ ತಲಾ ಐದು, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಚಿಕ್ಕಬಳ್ಳಾಪುರದಲ್ಲಿ ತಲಾ ಮೂರು, ವಿಜಯನಗರ, ಕೋಲಾರ, ದಕ್ಷಿಣ ಕನ್ನಡ, ಚಾಮರಾಜನಗರ, ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಎರಡು ಕುಟುಂಬಗಳ ಸಮೀಕ್ಷೆಯಷ್ಟೇ ನಡೆದಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಸೇರಿದ ಆನೇಕಲ್‌ ತಾಲ್ಲೂಕಿನಲ್ಲಿ ಒಂದು ಕುಟುಂಬ, ಮೈಸೂರು ಹಾಗೂ ತುಮಕೂರಿನಲ್ಲಿ ತಲಾ ಒಂದು ಕುಟುಂಬದ ಸಮೀಕ್ಷೆಯಷ್ಟೇ ನಡೆದಿದೆ.

ನಗರ ಜಿಲ್ಲೆಯಲ್ಲಿ ಸಮೀಕ್ಷೆ ಪ್ರಾರಂಭ

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲೂ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಅವರು ತಿಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 12,43,000 ಕುಟುಂಬಗಳ ಸಮೀಕ್ಷೆಯು ಪ್ರಾರಂಭವಾಗಿದೆ. ಸಮೀಕ್ಷಾದಾರರು/ಗಣತಿದಾರರನ್ನು ಆಯಾ ಬ್ಲಾಕ್‌ಗಳಿಗೆ ಈಗಾಗಲೇ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

‌ಸಮೀಕ್ಷೆಯ ಮುನ್ನ ಬೆಸ್ಕಾಂ ವಿದ್ಯುತ್ ಮೀಟರ್ ರೀಡರ್‌ಗಳ ಆರ್.ಆರ್.ನಂಬರ್‌ ಮೂಲಕ ಜಿಯೋ ಟ್ಯಾಗಿಂಗ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಮನೆಗಳ ಪಟ್ಟಿಯನ್ನು ಇಡಿಸಿಎಸ್ ಸರ್ವರ್‌ಗಳಲ್ಲಿ ಅಪಲೋಡ್ ಮಾಡಲಾಗಿದೆ. ಅದರ ಪ್ರಕಾರವೇ ಮನೆ ಮನೆ ಸಮೀಕ್ಷೆಯೂ ನಡೆದಿದೆ ಎಂದು ಅವರು
ಹೇಳಿದ್ದಾರೆ.

‘ಹಳ್ಳಿಕಾರ ಎಂದು ಬರೆಯಿಸಿ’

ರಾಜರಾಜೇಶ್ವರಿ ನಗರ: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಸಮೀಕ್ಷೆ) ವೇಳೆ ಕಡ್ಡಾಯವಾಗಿ ‘ಹಳ್ಳಿಕಾರ’ ಎಂದು ಬರೆಯಿಸಬೇಕು ಎಂದು ರಾಜ್ಯ ಹಳ್ಳಿಕಾರ ಸಂಘದ ಉಪಾಧ್ಯಕ್ಷ ಕೆ.ಎಂ.ನಾಗರಾಜ್ ತಿಳಿಸಿದ್ದಾರೆ.

ರಾಜ್ಯ ಹಳ್ಳಿಕಾರ ಸಂಘ, ಆರ್.ಎಂ.ಆರ್ ಫೌಂಡೇಷನ್ ಟ್ರಸ್ಟ್ ಸಹಯೋಗದೊಂದಿಗೆ ಸುಂಕದಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಣ್ಣ ಸಮುದಾಯದ ಪೈಪೋಟಿ ನಡೆಸಿ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರವರ್ಗ 1ಕ್ಕೆ ಸೇರಬೇಕಾಗಿದ್ದು, ಅಪಪ್ರಚಾರಗಳಿಗೆ ಕಿವಿಗೊಡಬಾರದು. 

ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಸರ್ಕಾರದ ಸವಲತ್ತು ಪಡೆಯಲು ಇದು ಸಹಕಾರಿಯಾಗುತ್ತದೆ ಎಂದರು.  ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮೂರ್ತಿ, ಖಜಾಂಚಿ ನಾರಾಯಣಪ್ಪ, ಮುಖಂಡರಾದ ಮಹಾಲಿಂಗಯ್ಯ, ರಂಗಶ್ರೀರಂಗಸ್ವಾಮಿ, ಸತ್ಯಮೂರ್ತಿ, ಹಳ್ಳಿಕಾರ ಯುವ ಘಟಕದ ಅಧ್ಯಕ್ಷ ತಿಮ್ಮರಾಜು, ಪ್ರಧಾನ ಕಾರ್ಯದರ್ಶಿ ಜಗದೀಶ್, ನಿರ್ದೇಶಕರಾದ ನಾಗಣ್ಣ, ಪುಟ್ಟೇಗೌಡ, ನರಸಿಂಹೇಗೌಡ, ಕೃಷ್ಣಪ್ಪ, ವೆಂಕಟೇಶ್, ತಿಮ್ಮೇಗೌಡ, ನಾಗರಾಜ್, ನಾರಯಣಪ್ಪ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸತ್ಯವತಿ ಮಾತನಾಡಿದರು.

ಸಮೀಕ್ಷೆ ಮುಂದೂಡಿ: ಖರ್ಗೆಗೆ ಮನವಿ

ಬೆಂಗಳೂರು: ‘ಸರಿಯಾದ ಸಿದ್ಧತೆ ಮಾಡಿ ಕೊಳ್ಳದೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಿಸಲಾಗಿದೆ. ಹೀಗಾಗಿ, ಮೂರು ತಿಂಗಳ ಅವಧಿಗೆ ಮುಂದೂಡಬೇಕು’ ಎಂದು ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ ಮನವಿ ಸಲ್ಲಿಸಿದೆ.

ಸದಾಶಿವನಗರದ ನಿವಾಸದಲ್ಲಿ ಖರ್ಗೆ ಅವರನ್ನು ಭೇಟಿ ಮಾಡಿದ ಒಕ್ಕಲಿಗ ನಾಯಕರು, ಸಮೀಕ್ಷೆ ಮುಂದೂಡುವಂತೆ ಆಗ್ರಹಿಸಿದರು. ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿಲ್ಲ. ಆ್ಯಪ್‌ನಲ್ಲಿ ಮಾಹಿತಿ ಅಪ್ ಲೋಡ್ ಆಗುತ್ತಿಲ್ಲ ಎಂದು ದೂರಿದರು.

ಖರ್ಗೆ ಅವರ ಭೇಟಿ ಬಳಿಕ ಮಾತ ನಾಡಿದ ರಾಜ್ಯ ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಅಡಿಟರ್‌ ನಾಗರಾಜ್ ಯಲಚವಾಡಿ,  ‘ಸಮೀಕ್ಷೆ ಮುಂದೂಡುವಂತೆ ಒಕ್ಕಲಿಗ ಸಮುದಾಯದ ಸಭೆಯಲ್ಲೂ ಮನವಿ ಮಾಡಲಾಗಿತ್ತು. ಆ ವಿಚಾರವನ್ನು ಖರ್ಗೆ ಅವರ ಗಮನಕ್ಕೆ ತರಲಾಗಿದೆ.’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.