ADVERTISEMENT

ಜಾತಿವಾರು ಸಮೀಕ್ಷೆಗೆ ಸಿಬ್ಬಂದಿ: ಸರ್ಕಾರಿ ಕಚೇರಿಗಳಲ್ಲಿ ಕೆಲಸ ಸ್ಥಗಿತ

ಬಾಲಕೃಷ್ಣ ಪಿ.ಎಚ್‌
Published 10 ಅಕ್ಟೋಬರ್ 2025, 19:45 IST
Last Updated 10 ಅಕ್ಟೋಬರ್ 2025, 19:45 IST
ಜಾತಿ ಗಣತಿ–ಪ್ರಾತಿನಿಧಿಕ ಚಿತ್ರ
ಜಾತಿ ಗಣತಿ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಪ್ರಾದೇಶಿಕ ಸಾರಿಗೆ ಕಚೇರಿ, ಬೆಸ್ಕಾಂ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಬಹುತೇಕ ನೌಕರರನ್ನು ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಮೀಕ್ಷೆಗೆ ಬಳಸಿ ಕೊಂಡಿರುವುದರಿಂದ ಕಚೇರಿಗಳಲ್ಲಿ ಬಹುತೇಕ ಕೆಲಸಗಳು ಸ್ಥಗಿತಗೊಂಡಿವೆ.

ಸಚಿವಾಲಯದಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ವಿವಿಧ ಕೆಲಸಗಳಿಗೆ ಇಲ್ಲವೇ ಮಾಹಿತಿ ಪಡೆಯಲು ಬರುವವರನ್ನು ಎರಡು ವಾರ ಇತ್ತ ತಲೆ ಹಾಕಬೇಡಿ. ಎಲ್ಲರೂ ಸಮೀಕ್ಷೆಗೆ ಹೋಗಿದ್ದಾರೆ ಎಂದು ಕಚೇರಿಯಲ್ಲಿರುವ ಬೆರಳೆಣಿಕೆಯ ಸಿಬ್ಬಂದಿ ತಿಳಿಸುತ್ತಿದ್ದಾರೆ.

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ 25ಕ್ಕೂ ಅಧಿಕ ಸಿಬ್ಬಂದಿ ಸಮೀಕ್ಷೆಗೆ ಹೋಗಿದ್ದಾರೆ. ಆರ್‌ಟಿಒ ಮತ್ತು ಸಾರಿಗೆ ನಿರೀಕ್ಷಕರು ಮಾತ್ರ ಸಮೀಕ್ಷೆಯಿಂದ ಹೊರಗಿದ್ದಾರೆ. ಆದರೆ, ವಾಹನದಾಖಲೆ ವರ್ಗಾವಣೆ, ಚಾಲನಾ ಪ್ರಮಾಣಪತ್ರ, ನೋಂದಣಿ ಪತ್ರ ಸಹಿತ ಯಾವುದೂ ಸಿಗುತ್ತಿಲ್ಲ. ಸಾರ್ವಜನಿಕರು ಕಚೇರಿಗೆ ಬಂದು ಕೆಲಸಗಳಾಗದೇ ಪಸ್ಸಾಗುತ್ತಿದ್ದಾರೆ.

ADVERTISEMENT

‘ಜನರು ಕಚೇರಿಗೆ ಬರುತ್ತಿದ್ದಾರೆ. ಸಿಬ್ಬಂದಿ ಇಲ್ಲ ಎಂಬುದು ಗೊತ್ತಾದಾಗ ಎದುರು ಸಿಗುವ ಡಾಟಾ ಆಪರೇಟರ್‌ಗಳಿಗೆ ಬೈದು ಹೋಗುತ್ತಿದ್ದಾರೆ. ಸರ್ಕಾರಕ್ಕೆ ಆದಾಯ ತರುವ ಇಲಾಖೆಯ ಸಿಬ್ಬಂದಿಯನ್ನು ಸಮೀಕ್ಷೆ, ಗಣತಿ ಕಾರ್ಯಕ್ಕೆ ಬಳಸಿಕೊಳ್ಳುತ್ತಿರಲಿಲ್ಲ. ಈ ಬಾರಿ ಯಾಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಇದರಿಂದ ಸರ್ಕಾರಕ್ಕೆ ಬರುವ ಆದಾಯಕ್ಕೆ ಕತ್ತರಿ ಬಿದ್ದಿದೆ’ ಎಂದು ಮೋಟಾರು ವಾಹನ ನಿರೀಕ್ಷಕರೊಬ್ಬರು ಮಾಹಿತಿನೀಡಿದರು.

‘ಎಲ್‌ಎಲ್‌ಆರ್‌ ಮಾಡಿಸಲೆಂದು ಆರ್‌ಟಿಒ ಕಚೇರಿಗೆ ಹೋದೆ. ಯಾರೂ ಇಲ್ಲ. ಎಲ್ಲರೂ ಸಮೀಕ್ಷೆಗೆ ಹೋಗಿದ್ದಾರೆ. ಮುಂದಿನ ತಿಂಗಳು ಬನ್ನಿ ಎಂದು ವಾ‍ಪಸ್‌ ಕಳುಹಿಸಿದ್ದಾರೆ’ ಎಂಬುದಾಗಿ ಎಲೆಕ್ಟ್ರಾನಿಕ್ ಸಿಟಿಯ ಗೌತಮ್ ದೂರಿದರು.

‘ಕಚೇರಿಯಲ್ಲಿ ಸಿಬ್ಬಂದಿ ಇಲ್ಲ ಎಂಬುದನ್ನು ಸಾರ್ವಜನಿಕರಿಗೆ ಮೊದಲೇ ತಿಳಿಸಿದ್ದರೆ ಕೆಲಸಕ್ಕೆ ರಜೆ ಹಾಕಿ ಬರುವುದಾದರೂ ತಪ್ಪುತ್ತಿತ್ತು. ನನ್ನಂತೆ ಅನೇಕರು ಬಂದು ವಾಪಸ್ಸಾದರು’ ಎಂದು ಜಯನಗರದ ಲಕ್ಷ್ಮೀಶ ಬೇಸರ ವ್ಯಕ್ತಪಡಿಸಿದರು

‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಗಿಯುವವರೆಗೆ ಜನರು ಸಹಕರಿಸಬೇಕು. ಸಮೀಕ್ಷೆ ಕಾರ್ಯ ಮುಗಿದ ಕೂಡಲೇ ಎಲ್ಲ ಸಿಬ್ಬಂದಿ ಕಚೇರಿಗೆ ಮರಳಲಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತುರ್ತು ಕೆಲಸಗಳಾಗುತ್ತಿವೆ

‘ಸಮೀಕ್ಷೆಗೆ ಸಿಬ್ಬಂದಿಯನ್ನು ನಿಯೋಜಿಸಿರುವುದರಿಂದ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಹಿಂದಿನಷ್ಟು ಸರಾಗವಾಗಿ ಆಗುತ್ತಿಲ್ಲ ಎಂಬುದು ನಿಜ. ಆದರೆ, ತುರ್ತು ಕೆಲಸಗಳನ್ನು ಮಾಡಿಕೊಡಲಾಗುತ್ತಿದೆ’ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಜಂಟಿ ಆಯುಕ್ತ ಸಿ. ಮಲ್ಲಿಕಾರ್ಜುನ ತಿಳಿಸಿದರು.

‘ಇದು ಒಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಉಂಟಾಗಿರುವ ಸಮಸ್ಯೆಯಲ್ಲ. ರಾಜ್ಯದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಇದೇ ಪರಿಸ್ಥಿತಿ ಇದೆ. ಸಮೀಕ್ಷೆ ಮುಗಿದ ಬಳಿಕ ಪರಿಸ್ಥಿತಿ ಸರಿಹೋಗಲಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.