ADVERTISEMENT

ಕುಡಿಯುವ ನೀರು ಪೂರೈಕೆ: ಕಾವೇರಿ 6ನೇ ಹಂತದ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 20:10 IST
Last Updated 27 ಫೆಬ್ರುವರಿ 2026, 20:10 IST
   

ಬೆಂಗಳೂರು: ಬೆಂಗಳೂರು ನಗರ ಮತ್ತು ಉಪನಗರಗಳಿಗೆ ಕುಡಿಯುವ ನೀರಿನ ಹೆಚ್ಚುವರಿ ಅಗತ್ಯ ಪೂರೈಸುವ ಉದ್ದೇಶದಿಂದ ₹6,939 ಕೋಟಿ ವೆಚ್ಚದ ಕಾವೇರಿ 6ನೇ ಹಂತದ ನೀರು ಸರಬರಾಜು ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಎರಡು ದಶಕಗಳಿಂದ ನಗರದ ಜನಸಂಖ್ಯೆ ಏರಿಕೆಯಾಗುತ್ತಿದೆ. ಈ ಕಾರಣದಿಂದ ನಗರ ಮತ್ತು ಉಪನಗರಗಳ ಜನರ ಉಪಯೋಗಕ್ಕಾಗಿ ಹೆಚ್ಚುವರಿ 6 ಟಿಎಂಸಿ ಅಡಿ(500 ಎಂಎಲ್‌ಡಿ) ನೀರು ಹಂಚಿಕೆ ಮಾಡಲಾಗಿದೆ.

ಹಂಚಿಕೆಯಾಗಿರುವ ಒಟ್ಟು 6 ಟಿಎಂಸಿ ಅಡಿ ನೀರಿನ ಪೈಕಿ 4 ಟಿಎಂಸಿ ಅಡಿ ನೀರನ್ನು ಬೆಂಗಳೂರು ನಗರಕ್ಕೆ ಮತ್ತು 2 ಟಿಎಂಸಿ ಅಡಿ ನೀರನ್ನು ಬೆಂಗಳೂರಿನ ಉಪನಗರಗಳಾದ ಚಿಕ್ಕಬಾಣಾವರ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ಬಾಶೆಟ್ಟಿಹಳ್ಳಿ, ವಿಜಯಪುರಕ್ಕೆ ‘ಬಲ್ಕ್ ವಾಟರ್ ಸಪ್ಲೈ’ ಮೂಲಕ ಹಂಚಿಕೆ ಮಾಡಲಾಗುತ್ತದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಯೋಜನಾ ವೆಚ್ಚದ ಶೇಕಡ 85ರಷ್ಟು ಮೊತ್ತವನ್ನು ಜೈಕಾದಿಂದ ಸಾಲದ ಮೂಲಕ ಹಾಗೂ ಉಳಿಕೆ ಶೇ 15ರಷ್ಟನ್ನು ಮಂಡಳಿಯ ಆಂತರಿಕ ಸಂಪನ್ಮೂಲದಿಂದ ಭರಿಸಬೇಕು.

ಜಲಸಂಗ್ರಹಾಗಾರ:

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬೆಂಗಳೂರಿನ ನರಸಿಂಹರಾಜ ಕಾಲೊನಿಯಲ್ಲಿರುವ ಬಿಟಿಆರ್ ಸೇವಾ ಠಾಣೆಯಲ್ಲಿರುವ ಶಿಥಿಲಗೊಂಡಿರುವ ಜಲಸಂಗ್ರಹಾಗಾರವನ್ನು ಕೆಡವಿ ಹೊಸದಾಗಿ 30 ಎಂಎಲ್‌ಡಿ ಸಾಮರ್ಥ್ಯದ ಆರ್‌ಸಿಸಿ ಜಲಸಂಗ್ರಹಾಗಾರವನ್ನು ನಿರ್ಮಿಸುವ ₹45.15 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.