ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಚಿತ್ರದುರ್ಗ ಯೋಜನಾ ಅನುಷ್ಠಾನ ಘಟಕದ ಯೋಜನಾ ನಿರ್ದೇಶಕ ಶ್ರೀನಿವಾಸುಲು ನಾಯ್ಡು ಕಾರಿನಲ್ಲಿ ಸಾಗಿಸುತ್ತಿದ್ದ₹ 3.5 ಲಕ್ಷ ನಗದು ವಶಪಡಿಸಿಕೊಂಡಿರುವ ಸಿಬಿಐ ಅಧಿಕಾರಿಗಳು, ತನಿಖೆ ಆರಂಭಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭೂಸ್ವಾಧೀನಕ್ಕೆ ಸಂಬಂಧಿಸಿ ದೇವನಹಳ್ಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೂನ್ 22ರಂದು ನಾಯ್ಡು ಭಾಗವಹಿಸಿದ್ದರು. ಗುತ್ತಿಗೆದಾರರಿಂದ ಲಂಚದ ಹಣ ಸಂಗ್ರಹಿಸಿ ಆಂಧ್ರಪ್ರದೇಶಕ್ಕೆಸಾಗಿಸುತ್ತಿದ್ದ ಮಾಹಿತಿ ಆಧರಿಸಿ ಸಿಬಿಐ ಕಾರ್ಯಾಚರಣೆ ನಡೆಸಿತ್ತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಆರೋಪಿಯು ಪ್ರಯಾಣಕ್ಕೆ ಬಳಸುತ್ತಿದ್ದ ವಾಹನದ ಶೋಧ ನಡೆಸಲಾಗಿತ್ತು. ಆಸನದ ಕೆಳಭಾಗದಲ್ಲಿ ಇರಿಸಿದ್ದ ಬ್ಯಾಗ್‌ನಲ್ಲಿ ಪತ್ತೆಯಾದ ಹಣಕ್ಕೆ ದಾಖಲೆ ಒದಗಿಸಲು ಅಧಿಕಾರಿ ವಿಫಲರಾಗಿದ್ದು, ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
‘ಆರೋಪಿ ಅಧಿಕಾರಿಯು ಲಂಚದ ಹಣವನ್ನು ತಮ್ಮ ಸ್ವಂತ ಊರಾದ ಆಂಧ್ರಪ್ರದೇಶದ ಕಾಳಹಸ್ತಿಗೆ ಸಾಗಿಸುತ್ತಿರುವ ಮಾಹಿತಿ ಲಭಿಸಿತ್ತು. ಈ ಅಧಿಕಾರಿ ರಾಜ್ಯದ ಗಡಿಯವರೆಗೂ ಕರ್ನಾಟಕ ನೋಂದಣಿ ಸಂಖ್ಯೆಯ ವಾಹನದಲ್ಲಿ ಪ್ರಯಾಣಿಸಿ, ಗಡಿಯಿಂದ ಆಂಧ್ರಪ್ರದೇಶ ನೋಂದಣಿ ಸಂಖ್ಯೆಯ ವಾಹನದಲ್ಲಿ ಹಣ ಸಾಗಿಸುವ ಮಾಹಿತಿ ದೊರಕಿತ್ತು. ಅಧಿಕಾರಿ, ಗುತ್ತಿಗೆದಾರರಿಂದ ಹಣ ಪಡೆದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.