ADVERTISEMENT

ಚಿನ್ನ ಕಳ್ಳ ಸಾಗಣೆ: ನಟಿ ರನ್ಯಾ ರಾವ್‌ ಪ್ರಕರಣ; ಸಿಬಿಐ ತನಿಖೆ

ಡಿಆರ್‌ಐ ಅಧಿಕಾರಿಗಳ ಪ್ರಶ್ನಾವಳಿ: ಕಣ್ಣೀರಿಟ್ಟ ನಟಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 15:31 IST
Last Updated 8 ಮಾರ್ಚ್ 2025, 15:31 IST
ರನ್ಯಾ ರಾವ್‌ 
ರನ್ಯಾ ರಾವ್‌    

ಬೆಂಗಳೂರು: ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್‌ ಪ್ರಕರಣವೂ ಸೇರಿದಂತೆ ಮೂರು ಪ್ರಕರಣಗಳ ತನಿಖೆ ಕೈಗೆತ್ತಿಕೊಳ್ಳಲು ಸಿಬಿಐ ಮುಂದಾಗಿದೆ.

‘ವಿದೇಶಗಳಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡುವಾಗ ಬೆಂಗಳೂರು, ಮುಂಬೈ ಹಾಗೂ ದೆಹಲಿಯ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳ ವಿರುದ್ಧ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಲಿದೆ. ಡಿಆರ್‌ಐ ಅಧಿಕಾರಿಗಳ ಮಾಹಿತಿ ಆಧರಿಸಿ ರನ್ಯಾ ವಿರುದ್ಧವೂ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ’ ಎಂದು ಮೂಲಗಳು ತಿಳಿಸಿವೆ.

ದೆಹಲಿಯಿಂದ ನಗರಕ್ಕೆ ಶನಿವಾರ ಬಂದ ಸಿಬಿಐ ಅಧಿಕಾರಿಗಳು, ರನ್ಯಾ ವಿರುದ್ಧ ದಾಖಲಾದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ‌

ADVERTISEMENT

‘ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು, ಶುಕ್ರವಾರ ಸಂಜೆಯೇ ರನ್ಯಾ ಅವರನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದು ಎಚ್‌ಬಿಆರ್‌ ಲೇಔಟ್‌ನ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಕಚೇರಿಗೆ ಭೇಟಿ ನೀಡಿರುವ ಸಿಬಿಐ ಅಧಿಕಾರಿಗಳು, ಡಿಆರ್‌ಐ ತನಿಖಾಧಿಕಾರಿಗಳ ಜತೆಗೆ ರನ್ಯಾ ಅವರನ್ನು ವಿಚಾರಣೆಗೆ ಒಳಪಡಿಸಿದರು’ ಎಂದು ಮೂಲಗಳು ತಿಳಿಸಿವೆ.

‘ಕೆಲವರು ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡಿ ಚಿನ್ನವನ್ನು ಕಳ್ಳ ಸಾಗಣೆ ಮಾಡಿಸುತ್ತಿದ್ದರು’ ಎಂಬುದಾಗಿ ರನ್ಯಾ ಹೇಳಿಕೆ ನೀಡಿದ್ದರು. ಅದನ್ನು ಆಧರಿಸಿ ತನಿಖೆ ಮುಂದುವರೆಸಿರುವ ಡಿಆರ್‌ಐ ಅಧಿಕಾರಿಗಳು, ರನ್ಯಾ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಶನಿವಾರ ದಿನವಿಡೀ ವಿಚಾರಣೆ ನಡೆಸಿದ್ದಾರೆ. ಸಂಚುಕೋರರು ಹಾಗೂ ನಟಿಯಿಂದ ಚಿನ್ನ ಖರೀದಿಸಿದ್ದವರ ಹೆಸರು ಬಾಯ್ಬಿಡಿಸಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ವಿಚಾರಣೆ ವೇಳೆ ರನ್ಯಾ ಕಣ್ಣೀರಿಟ್ಟಿದ್ದಾರೆ. ಕೆಲವರ ಹೆಸರನ್ನು ರನ್ಯಾ ಹೇಳಿದ್ದು ಅವರನ್ನು ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ.

‘ರನ್ಯಾ ಬಳಸುತ್ತಿದ್ದ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ವಶಕ್ಕೆ ಪಡೆಯಲಾಗಿದೆ. ರಾಜಕಾರಣಿಗಳು, ಚಿನ್ನದ ವ್ಯಾಪಾರಿಗಳು, ಕಳ್ಳ ಸಾಗಣೆದಾರರ ಜತೆಗೆ ರನ್ಯಾ ಸಂಪರ್ಕದಲ್ಲಿ ಇರುವುದು ಪತ್ತೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪದೇಪದೇ ವಿದೇಶಕ್ಕೆ ಪ್ರಯಾಣ: ರನ್ಯಾ ಅವರು ಪದೇಪದೇ ವಿದೇಶಕ್ಕೆ ತೆರಳುತ್ತಿದ್ದ ವಿವರವೂ ವಿಮಾನ ನಿಲ್ದಾಣದ ವಲಸೆ ವಿಭಾಗದ ದಾಖಲೆಗಳಲ್ಲಿ ನಮೂದಾಗಿದೆ.

‘ಡಿ.24ರಂದು ದುಬೈಗೆ ತೆರಳಿದ್ದ ರನ್ಯಾ, ಡಿ.27ಕ್ಕೆ ಬೆಂಗಳೂರಿಗೆ ವಾಪಸ್ ಬಂದಿದ್ದರು. ಜ.18ರಂದು ಅಮೆರಿಕಕ್ಕೆ ತೆರಳಿದ್ದ ನಟಿ, ಅಲ್ಲಿ ಒಂದು ವಾರ ವಾಸ್ತವ್ಯ ಮಾಡಿದ್ದರು. ಜ.25ರಂದು ಅಮೆರಿಕದಿಂದ ನಗರಕ್ಕೆ ವಾಪಸ್ ಬಂದಿದ್ದರು. ಫೆಬ್ರುವರಿ 2ರಿಂದ ಮಾರ್ಚ್‌ 3ರ ಮಧ್ಯೆ, ಐದು ಬಾರಿ ದುಬೈಗೆ ತೆರಳಿ ವಾಪಸ್‌ ಬಂದಿದ್ದರು’ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಜಯಮಾಲಾ ಪುತ್ರಿಯ ಮದುವೆಯಲ್ಲಿ ರನ್ಯಾ

ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ಹಾಗೂ ರನ್ಯಾ ಅವರ ಸಹೋದರ ವೃಷಭ್ ಅವರ ಮದುವೆ ಸಮಾರಂಭವು ನಗರದಲ್ಲಿ ಇತ್ತೀಚೆಗೆ ನೆರವೇರಿತ್ತು. ಸಮಾರಂಭದಲ್ಲಿ ರನ್ಯಾ ಅವರೇ ಕಳಸಗಿತ್ತಿಯಾಗಿದ್ದರು. ಅದರ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಡಿಜಿಪಿ ಕೆ. ರಾಮಚಂದ್ರರಾವ್‌ ಅವರ ಪುತ್ರ ವೃಷಭ್. ಇವರ ಮಲಮಗಳು ರನ್ಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.