ADVERTISEMENT

ಡಿಕೆಶಿ ವಿರುದ್ಧ ಯತ್ನಾಳ ಅರ್ಜಿ: ನ್ಯಾ.ಸೂರ್ಯಕಾಂತ್ ಪೀಠದಲ್ಲಿ ಇತ್ಯರ್ಥಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 15:46 IST
Last Updated 22 ಸೆಪ್ಟೆಂಬರ್ 2025, 15:46 IST
<div class="paragraphs"><p>ಯತ್ನಾಳ ಡಿಕೆಶಿ</p></div>

ಯತ್ನಾಳ ಡಿಕೆಶಿ

   

ನವದೆಹಲಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲ್ಲಿಸಿರುವ ವಿಶೇಷ ಮೇಲ್ಮನವಿಯ ಅರ್ಜಿಯನ್ನು ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವ ‍ಪೀಠವು ಇತ್ಯರ್ಥಪಡಿಸಲಿದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ತಿಳಿಸಿದೆ. 

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು, ‘ಈ ಅರ್ಜಿಯನ್ನು ಈ ಹಿಂದೆ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ವಿಚಾರಣೆ ನಡೆಸಿತ್ತು. ನ್ಯಾಯದ ಹಿತದೃಷ್ಟಿಯಿಂದ ಆ ಪೀಠವೇ ಅರ್ಜಿಯ ಇತ್ಯರ್ಥ ಮಾಡಲಿ’ ಎಂದು ನಿರ್ದೇಶನ ನೀಡಿತು.

ADVERTISEMENT

ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ‘ರಾಜಕೀಯ ದ್ವೇಷಗಳನ್ನು ನ್ಯಾಯಾಲಯಗಳಲ್ಲಿ ಅಲ್ಲ, ಬೇರೆಡೆ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸಿಜೆಐ ಈ ಹಿಂದೆ ಹೇಳಿದ್ದರು’ ಎಂದು ಹೇಳಿದರು.

ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಯತ್ನಾಳ ಹಾಗೂ ಸಿಬಿಐ ಪರ ವಕೀಲರು ಕೋರಿದರು. 

ಪ್ರಕರಣವೇನು?: 2013ರ ಏಪ್ರಿಲ್‌ 1ರಿಂದ 2018ರ ಏಪ್ರಿಲ್‌ 30ರ ವಧಿಯಲ್ಲಿ ಶಿವಕುಮಾರ್ ಅಕ್ರಮವಾಗಿ ₹74.93 ಕೋಟಿ ಮೌಲ್ಯದ ಆಸ್ತಿ ಗಳಿಸಿದ್ದಾರೆ ಎಂದು ಸಿಬಿಐ ಎಫ್‌ಐಆರ್ ದಾಖಲಿಸಿತ್ತು. 

2013ರ ಮಾರ್ಚ್‌ 31ರ ವೇಳೆಗೆ ಶಿವಕುಮಾರ್‌ ಕುಟುಂಬ ₹33.92 ಕೋಟಿ ಆಸ್ತಿ ಹೊಂದಿತ್ತು. ಐದು ವರ್ಷಗಳಲ್ಲಿ ಅವರ ಕುಟುಂಬ ₹166.79 ಕೋಟಿಯನ್ನು ವರಮಾನ ಮತ್ತು ಇತರ ರೂಪದಲ್ಲಿ ಪಡೆದಿದೆ. ಇದೇ ಅವಧಿಯಲ್ಲಿ ₹113.12 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಅಂಶ ಸಿಬಿಐ ಎಫ್‌ಐಆರ್‌ನಲ್ಲಿತ್ತು.

2018ರ ಏ.30ರ ವೇಳೆಗೆ ಆರೋಪಿತರ ಕುಟುಂಬ ₹128.60 ಕೋಟಿ ಆಸ್ತಿ ಹೊಂದಿತ್ತು. ವರಮಾನ, ಸ್ವೀಕೃತಿ ಮತ್ತು ವೆಚ್ಚಕ್ಕೆ ಹೋಲಿಸಿದರೆ ಶೇಕಡ 44.93ರಷ್ಟು ಹೆಚ್ಚುವರಿ ಆಸ್ತಿ ಇರುವುದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿತ್ತು. 

ಸಿಬಿಐ ತನಿಖೆಗೆ ಬಿಜೆಪಿ ಸರ್ಕಾರ 2019ರಲ್ಲಿ ನೀಡಿತ್ತು. ಈ ಅನುಮತಿಯನ್ನು ಕಾಂಗ್ರೆಸ್‌ ಸರ್ಕಾರ 2023ರ ನವೆಂಬರ್ 23ರಂದು ಹಿಂಪಡೆದಿತ್ತು. ನಂತರ ಲೋಕಾಯುಕ್ತ ತನಿಖೆಗೆ ವಹಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.